ವಿವಿಧ ದೇವಾಲಯಗಳಲ್ಲಿ ಅನ್ನದಾಸೋಹ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಿಂದುತ್ವದ ಹುಲಿ ಎಂದು ರಾಜ್ಯದ ಜನರ ಪ್ರೀತಿ ಪಾತ್ರವಾಗಿರುವ ಡಾ.ಸಿ.ಟಿ.ರವಿ ಅವರ 59ನೇ ಜನ್ಮದಿನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಾದ್ಯಂತ ಬಿಜೆಪಿ ಕಾರ್ಯಕರ್ತರು, ಸಿ.ಟಿ.ರವಿ ಅಭಿಮಾನಿಗಳು ಶನಿವಾರ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಜನ್ಮದಿನದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಅನ್ನದಾಸೋಹ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಜತೆಗೆ, ಆಸ್ಪತ್ರೆ ರೋಗಿಳಿಗೆ ಹಣ್ಣು ವಿತರಿಸುವ ಮೂಲಕ ಆಚರಿಸಿದರು.

ಡಾ.ಸಿ.ಟಿ. ರವಿ ಅವರು ಚಿಕ್ಕಮಗಳೂರಿನ ಕಲ್ಯಾಣನಗರದ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ಗಣನಾಥನ ದಿವ್ಯ ದರ್ಶನ ಪಡೆದರು.


ಈ ವೇಳೆ ರಾಜಕೀಯ ಸಂಬಂಧಗಳನ್ನು ಮೀರಿ ತಮ್ಮ ಬದುಕಿನ ಶಕ್ತಿಯಾಗಿ ಸದಾ ಜೊತೆಯಾಗಿ ನಿಂತಿರುವ ಪ್ರೀತಿಯ ಕಾರ್ಯಕರ್ತ ಬಂಧುಗಳು ಹಾಗೂ ಪಕ್ಷದ ಮುಖಂಡರೊಂದಿಗೆ ದೇವರ ದರ್ಶನ ಪಡೆದರು. ದೇಶ, ರಾಜ್ಯ ಹಾಗೂ ಸಮಾಜದ ಒಳಿತಿಗೆ ಮತ್ತು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸಿದರು.

ಬಳಿಕ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ವಾದ್ಯಗಳೊಂದಿಗೆ ದೇವಸ್ಥಾನದ ಆವರಣಕ್ಕೆ ತಮ್ಮ ನಾಯಕರಾದ ಡಾ.ಸಿ.ಟಿ.ರವಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾರ್ಯಕರ್ತರು ಮತ್ತು ಮುಖಂಡರು ಜನ್ಮದಿನದ ಶುಭಾಶಯತಿಳಿಸಿ ಸಂಭ್ರಮ ವ್ಯಕ್ತಪಡಿಸಿದರು.ಬಳಿಕ ಇದೇ ಪವಿತ್ರ ಸನ್ನಿಧಿಯಲ್ಲಿ ಕನ್ನಡದ ರಾಮಾಯಣ ಪ್ರವಚನಗಳ ಮೂಲಕ ನಾಡಿನ ಮನೆಮಾತಾಗಿರುವ ಖ್ಯಾತ ವಿದ್ವಾಂಸ ಹಿರೇಮಗಳೂರು ಕಣ್ಣನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಡಾ. ಸಿ.ಟಿ.ರವಿ, ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ದೇವರ ಕೃಪೆ, ಕಾರ್ಯಕರ್ತರ ನಿಸ್ವಾರ್ಥ ಪ್ರೀತಿ ಹಾಗೂ ಜನರ ಆಶೀರ್ವಾದವೇ ಶಕ್ತಿಯಾಗಿದೆ. ಬದುಕಿನ ಎಲ್ಲ ವಿಘ್ನಗಳನ್ನು ದೂರಮಾಡಿ ಸನ್ಮಾರ್ಗದಲ್ಲಿ ಮುನ್ನಡೆಸುವ ಶ್ರೀ ಪಂಚಮುಖಿ ಗಣಪತಿ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಹಿರೇಮಗಳೂರು ಕೇವಲ ಒಂದು ಕ್ಷೇತ್ರವಲ್ಲ, ರಾಮಭಕ್ತಿ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುವ ಪವಿತ್ರ ತಾಣವಾಗಿದೆ. ಶ್ರೀ ಕೋದಂಡರಾಮ ಸ್ವಾಮಿ ಹಾಗೂ ಪೂಜ್ಯ ಶ್ರೀ ಹಿರೇಮಗಳೂರು ಕಣ್ಣನ್ ಅವರ ಆಶೀರ್ವಾದ ಸದಾ ನನ್ನ ಮೇಲೂ, ನಾಡಿನ ಸಮಸ್ತ ಜನತೆ ಮೇಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮ ಗಳೂರು ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ರಾಜು ಮಣೇನಹಳ್ಳಿ, ಜಯಣ್ಣ ನೆಟೆಕೆರೆನಹಳ್ಳಿ, ಕನಕರಾಜ್ ಅರಸ್, ದೀಪಕ್ ದೊಡ್ಡಯ್ಯ, ದಂಟರಮುಕ್ಕಿ ಮೋಹನ್, ರೇವನಾಥ್ ಬಿ. ಹಿರೇಮಗಳೂರು, ಎಚ್.ಎನ್.ಶಿವಕುಮಾರ್, ಮಂಜುನಾಥ್, ನಂದನ್ ಕುಮಾರ್, ಅರುಣ್ ಕುಮಾರ್, ರಾಜಕುಮಾರ್, ಪ್ರದೀಪ್, ಬೂತ್ ಅಧ್ಯಕ್ಷ ರಾಜು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.