ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಮೂಲಕ ವೃಕ್ಷ ಮಾತೆ ಡಾ. ಸಾಲುಮರ ತಿಮ್ಮಕ್ಕ ಉದ್ಯಾನವನ ನಿರ್ಮಾಣದ ಚಿಂತನೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ.ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ಆಶ್ರಯದಲ್ಲಿ ಕುಶಾಲನಗರ ಕೊಪ್ಪ ಗಡಿ ಭಾಗದ ಪ್ರೆಶರ್ಪೆಟೆ ಸೇತುವೆ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಲುಮರ ತಿಮ್ಮಕ್ಕ ಅವರ 115 ನೇ ಜನ್ಮದಿನದ ಅಂಗವಾಗಿ ನಡೆದ ವಿದ್ಯಾರ್ಥಿಗಳೊಂದಿಗೆ ಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಾಸಕರ ಅನುದಾನ ಮತ್ತು ಇಲಾಖೆಯ ಮೂಲಕ ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಅವರ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪರಿಸರ ತಜ್ಞರಾದ ಭಜನ್ ಬೋಪಣ್ಣ ಮಾತನಾಡಿ, ಪ್ರಕೃತಿಯಲ್ಲಿ ಅಗಾಧ ಶಕ್ತಿ ಅಡಗಿದೆ. ಆರಾಧನೆ ಮೂಲಕ ಶಕ್ತಿ ಗಳಿಸಲು ಸಾಧ್ಯ ಎಂದರಲ್ಲದೆ ನದಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದರು.ಸಾಲುಮರ ತಿಮ್ಮಕ್ಕ ಅವರ ಸಾಧನೆ ಮತ್ತು ಅವರಿಗೆ ಲಭಿಸಿದ ಗೌರವ ಬಗ್ಗೆ ಸಾಲುಮರ ತಿಮ್ಮಕ್ಕ ಫೌಂಡೇಶನ್ ಪ್ರಶಸ್ತಿಗೆ ಭಾಜನರಾದ ಪರಿಸರ ಬಳಗದ ಸಂಚಾಲಕ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಸಮಗ್ರ ಮಾಹಿತಿ ಒದಗಿಸಿದರು.
ಉದ್ಯಮಿ ಹಾಗೂ ರೋಟರಿ ಕ್ಲಬ್ ನಿರ್ಗಮಿತ ಅಧ್ಯಕ್ಷರಾದ ಮನು ಪೆಮ್ಮಯ್ಯ, ಭಾರತ ಮಾತಾ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಫಾ ಪ್ರದೀಶ್ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಭಜನ್ ಬೋಪಣ್ಣ ಅವರ ಪುತ್ರ ಇಂಡಿಯನ್ ಮೋಗ್ಲಿ ಖ್ಯಾತಿಯ ಪುಟ್ಟ ಬಾಲಕ ವಿಯಾನ್ ಬೋಪಣ್ಣ ಅವರು ಸಾಲುಮರ ತಿಮ್ಮಕ್ಕ ಅವರ ಬಗ್ಗೆ ಮಾಹಿತಿ ಉಳ್ಳ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾವೇರಿ ರೋಟರಿ ಉದ್ಯಾನವನ ನಿರ್ಮಾತೃ ಉದ್ಯಮಿ ಮನುಪೆಮ್ಮಯ್ಯ, ಪರಿಸರ ತಜ್ಞರಾದ ಭಜನ್ ಬೋಪಣ್ಣ ದಂಪತಿಗಳನ್ನು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಾಚಣಿಯಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ ಉಪಸ್ಥಿತರಿದ್ದರು.
ಸ್ಥಳೀಯ ಕೊಪ್ಪ ಭಾರತಮಾತ ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪತ್ರಕರ್ತ ಭೋಜನ ರೆಡ್ಡಿ ನಿರೂಪಿಸಿ ಸ್ವಾಗತಿಸಿದರು. ಕಾರ್ಯಕ್ರಮ ಆಯೋಜಕ ವನಿತಾ ಚಂದ್ರಮೋಹನ್ ವಂದಿಸಿದರು. ಧರಣಿ ಸೋಮಯ್ಯ ಪ್ರಾರ್ಥಿಸಿದರು.