ಡಾ. ಅಬ್ದುಲ್‌ ಖದೀರ್‌ಗೆ ರಾಷ್ಟ್ರೀಯ ಪ್ರಶಸ್ತಿ

| Published : Feb 10 2024, 01:51 AM IST

ಸಾರಾಂಶ

ಸ್ಕೌಟ್ಸ್ ಮತ್ತು ಗೈಡ್ಸ್‌ ಚಳವಳಿಗೆ ನೀಡಿದ ಅನುಪಮ ಕೊಡುಗೆಗಾಗಿ ಅಬ್ದುಲ್‌ ಖದೀರ್‌ ಅವರನ್ನು 2023-24ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

ಕನ್ನಡಪ್ರಭವಾರ್ತೆ ಬೀದರ್

ಇಲ್ಲಿಯ ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ಅವರಿಗೆ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್ನ ‘ಸಿಲ್ವರ್‌ ಎಲಿಫೆಂಟ್‌’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಸ್ಕೌಟ್ಸ್ ಮತ್ತು ಗೈಡ್ಸ್‌ ಚಳವಳಿಗೆ ನೀಡಿದ ಅನುಪಮ ಕೊಡುಗೆಗಾಗಿ ಅಬ್ದುಲ್‌ ಖದೀರ್‌ ಅವರನ್ನು 2023-24ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಷ್ಟ್ರೀಯ ಹೆಚ್ಚುವರಿ ಮುಖ್ಯ ಆಯುಕ್ತ ಎಂ.ಎ. ಖಾಲೀದ್ ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ಅವರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ತಮ್ಮನ್ನು ಸ್ಕೌಟ್ಸ್ ಮತ್ತು ಗೈಡ್ಸ್ನ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ಉಂಟು ಮಾಡಿದೆ ಎಂದು ಡಾ. ಅಬ್ದುಲ್ ಖದೀರ್ ಪ್ರತಿಕ್ರಿಯಿಸಿದ್ದಾರೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಯುವಜನರ ಅತಿದೊಡ್ಡ ಸಂಸ್ಥೆಯಾಗಿದೆ. ವಿಶ್ವದ 225 ದೇಶಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಸಮಾನತೆ, ಸಹೋದರತ್ವ, ಸೇವಾ ಭಾವವನ್ನು ಬೆಳೆಸುತ್ತಿದೆ. 20 ವರ್ಷಗಳಿಂದ ಈ ಸಂಸ್ಥೆಯ ಭಾಗವಾಗಿರುವುದು ನನಗೆ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನಷ್ಟು ಉತ್ಸಾಹದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.

ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುವ ಅಬ್ದುಲ್ ಖದೀರ್ ಅವರು ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆಗಿದ್ದಾರೆ. ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಅನೇಕ ಪ್ರಶಸ್ತಿ, ಸಮ್ಮಾನಗಳು ಸಂದಿವೆ.