ಧಾರವಾಡ:

ರಾಘವೇಂದ್ರ ಪಾಟೀಲರ ಅನುಭವದ ಸಂಪನ್ನತೆ, ಪ್ರತಿಭೆ ಮತ್ತು ಸಾರ್ಥಕ ಉದ್ದೇಶಗಳನ್ನು ಅವರ ಕೃತಿಗಳ ಮೂಲಕ ಅರಿಯಬಹುದು. 75ರ ಹರೆಯದಲ್ಲೂ ಅವರ ಸಾಹಿತ್ಯದಲ್ಲಿ ಕಥೆ, ಕಾವ್ಯದ ಪ್ರಮೇಯ, ಪ್ರೀತಿ, ಒಲವು ಮತ್ತು ಆಸಕ್ತಿ ಇನ್ನೂ ಇದೆ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಬಣ್ಣಿಸಿದರು.

ಸಾಹಿತಿ ರಾಘವೇಂದ್ರ ಪಾಟೀಲರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನೆಯಲ್ಲಿ ಅವರು ಮಾತನಾಡಿ, ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ ರಾಘವೇಂದ್ರ ಪಾಟೀಲರು ತಮ್ಮ ಜೀವನ ಹಾಗೂ ಸಾಹಿತ್ಯವನ್ನು ಸಮನಾಗಿ ತೂಗಿಸಿಕೊಂಡು ಬಂದಿದ್ದಾರೆ. ಅವರು ಸಾಹಿತಿಯೂ ಹೌದು, ವಿಜ್ಞಾನಿಯೂ ಹೌದು. ಮಧ್ಯೆದಲ್ಲಿ ಅಧ್ಯಾತ್ಮವನ್ನೂ ಹೊಂದಿದ್ದಾರೆ. ಅಧ್ಯಾತ್ಮದ ದೀಪದ ಬೆಳಕು ಅವರ ಸಾಹಿತ್ಯ ಮತ್ತು ವಿಜ್ಞಾನವನ್ನು ತೆಗೆದುಕೊಂಡು ಹೋಗುತ್ತಿದೆ ಎಂದರು.

ರಾಘವೇಂದ್ರ ಪಾಟೀಲರ ತೇರು ಸೇರಿದಂತೆ ಅನೇಕ ಕೃತಿಗಳು ಅವರ ಶಿಸ್ತಿನ ಭಾಗವಾಗಿವೆ. ಆದರೆ, ಗೈರ ಸಮಜೂತಿ ಈಗಿನ ಪೀಳಿಗೆಗೆ ಓದಲು ಕಷ್ಟದಾಕ. ಈ ಕೃತಿಯನ್ನು ಕೇಳುವ ಮಾಧ್ಯಮದಲ್ಲಿ ರಾಘವೇಂದ್ರ ಪಾಟೀಲರು ಓದಿ ಹೇಳಿದರೆ ಮುಂದಿನ ಪೀಳಿಗೆಗೆ ಸುಲಭವಾಗಿ ಈ ಕೃತಿ ತಲುಪಲಿದೆ ಎಂದ ಪಟ್ಟಣಶೆಟ್ಟಿ, ಸಾಹಿತಿಗಳು ಕಷ್ಟಕರ, ಕಠಿಣ ಪದಗಳ ಅರ್ಥವನ್ನು ಪ್ರತಿ ಪುಸ್ತಕದಲ್ಲಿ ಒದಗಿಸುವುದು ಸೂಕ್ತ ಎಂಬ ಸಲಹೆ ನೀಡಿದರು.

75ರಲ್ಲೂ ಜೀವಕಳೆ:


ರಾಘವೇಂದ್ರ ಪಾಟೀಲ ಅವರ ಬೆಳ್ಳಕ್ಕಿಗಳ ಲೋಕದಲ್ಲಿ, ತೇರು ಹಾಗೂ ಜೀವ ಸ್ಪರ್ಶ ಕೃತಿಗಳನ್ನು ಬಿಡುಗಡೆ ಮಾಡಿದ ಕನ್ನಡಪ್ರಭ ಪುರವಣಿ ಸಂಪಾದಕ, ಸಾಹಿತಿ ಜೋಗಿ, ಡಾ. ರಾಘವೇಂದ್ರ ಪಾಟೀಲರ ಜೀವನಕ್ಕೆ 75 ವರ್ಷ. ಅವರ ಬರಹದ ಹಾಗೂ ಸಾಂಸಾರಿಕ ಜೀವನಕ್ಕೆ 50 ವರ್ಷ. ಈಗಲೂ ಅವರಲ್ಲಿ ಸಾಕಷ್ಟು ಜೀವಕಳೆ ಇದೆ. ತನ್ನ ಅಂತರಂಗದಲ್ಲಿ ಹುಟ್ಟಿದ ಪ್ರೀತಿಯ ಸೆಲೆ, ಅವಮಾನ ಹಾಗೂ ಎದುರಿಸಿದ ತಲ್ಲಣಗಳನ್ನು ಹೇಳಲು ಪ್ರತಿಯೊಬ್ಬ ಲೇಖಕನು ಬೇರೆ ಬೇರೆ ರೀತಿ, ಶೈಲಿ ಹಾಗೂ ತಂತ್ರಗಳನ್ನು ತನ್ನ ಕೃತಿಯಲ್ಲಿ ಬಳಸುತ್ತಾನೆ. ಇದನ್ನು ರಾಘವೇಂದ್ರ ಪಾಟೀಲರು ಸಮರ್ಥವಾಗಿ ನಿಬಾಯಿಸಿದ್ದಾರೆ ಎಂದರು.

ಮಾಯಾ ವಾಸ್ತವದ ನಿಜವಾದ ಕಲ್ಪನೆಗಳನ್ನು ಅವರ ಕೃತಿಗಳಲ್ಲಿ ಕಂಡಿದ್ದೇವೆ. ಅದರಲ್ಲೂ ಲಯ ಕಥೆಯಲ್ಲಿ ಮಾಯಾ ವಾಸ್ತವ ಗುಣ ಹಾಗೂ ಛಾಯೆ ದಟ್ಟವಾಗಿದೆ. ಇಡೀ ಕಥೆ ನಡೆಸುವ ಉರುಗೋಲಾಗಿ ಬಳಕೆಯಾಗಿದೆ ಎಂದ ಅವರು, ರಾಪಾ ಅವರು ಕಾಲಕ್ಕೆ ತಕ್ಕಂತೆ ಒಡ್ಡಿಕೊಂಡು ಕಾಲದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಮೊದಲಿನ ಕಥೆಯಲ್ಲಿನ ಅಂತರ್ಗತ ಅಂಶಗಳನ್ನು ಇವತ್ತಿನ ಕಾದಂಬರಿ ಒಳಗೊಂಡು ಓದುಗರನ್ನು ಸೆರೆಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಚೆನ್ನಯ್ಯ ಸ್ವಾಮೀಜಿ, ದುರ್ಗದ ಮಲ್ಲಾಡಿಹಳ್ಳಿಯಲ್ಲಿಯ ಅನಾಥ ಸೇವಾಶ್ರಮ ಇಂದು ಖ್ಯಾತಿ ಪಡೆಯಲು ಕಾರಣರಾದವರಲ್ಲಿ ರಾಘವೇಂದ್ರ ಪಾಟೀಲ ಸಹ ಒಬ್ಬರು. ಅವರ ಕಾರ್ಯ ಇಂದಿನ ತಲೆಮಾರಿಗೂ ಪ್ರಸ್ತುತ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು. ಹಿರಿಯರಾದ ಪ್ರೊ. ದುಷ್ಯಂತ ನಾಡಗೌಡ, ಹರ್ಷ ಡಂಬಳ, ಡಾ. ಶಶಿಧರ ತೋಡಕರ, ಡಾ. ಎಂ.ಜಿ. ಹೆಗಡೆ ಇದ್ದರು. ಇದೇ ವೇಳೆ ರಾಘವೇಂದ್ರ ಪಾಟೀಲ ಹಾಗೂ ಅವರ ಪತ್ನಿ ಜಯಶ್ರೀ ಅವರನ್ನು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ತದನಂತರ ರಾಘವೇಂದ್ರ ಪಾಟೀಲರ ಸಾಹಿತ್ಯ ಕುರಿತು ಗೋಷ್ಠಿಗಳು ನಡೆದವು. ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನಾ ಪರ ನುಡಿ ಹೇಳಿದರು. ಡಾ. ಶ್ರೀನಿವಾಸ ವಾಡಪ್ಪಿ ಇದ್ದರು.