ಡಾ. ರಾಮದಾಸ್ ಎಂ. ಪೈ 90ನೇ ಹುಟ್ಟುಹಬ್ಬ: ಮಾಹೆಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

| Published : Sep 18 2025, 01:10 AM IST

ಡಾ. ರಾಮದಾಸ್ ಎಂ. ಪೈ 90ನೇ ಹುಟ್ಟುಹಬ್ಬ: ಮಾಹೆಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಮಣಿಪಾಲದ ನಿರ್ಮಾತೃ, ಪದ್ಮಭೂಷಣ, ಮಾಹೆ ವಿ.ವಿ.ಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ಮಣಿಪಾಲದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಸಂಪನ್ನಗೊಂಡಿತು.

ಮಣಿಪಾಲ: ಭವಿಷ್ಯತ್ತು ಎಂದರೆ ಸಂಶೋಧನೆ, ಸಂಶೋಧನೆಯು ಭವಿಷ್ಯದ ಜಗತ್ತನ್ನು ರೂಪಿಸಲಿದೆ, ಆದರೆ ಈ ಸಂಶೋಧನೆಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಆಸ್ಟ್ರಿಯಾದ ಲಿಯೋಬೆನ್ ತಾಂತ್ರಿಕ ವಿಶ್ವವಿದ್ಯಾನಿಲಯದ ರೆಕ್ಟರ್ ಪ್ರೊ. ಪೀಟರ್ ಮೊಸೆರ್ ಹೇಳಿದ್ದಾರೆ.ಬುಧವಾರ, ಆಧುನಿಕ ಮಣಿಪಾಲದ ನಿರ್ಮಾತೃ, ಪದ್ಮಭೂಷಣ, ಮಾಹೆ ವಿ.ವಿ.ಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಪ್ರಯುಕ್ತ ಮಾಹೆಯ ವಾಲೆಂಟಿಯರ್ ಸರ್ವಿಸ್ ಆರ್ಗನೈಜೆಶನ್ ವತಿಯಿಂದ ಮಣಿಪಾಲದಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯತ್ತ’ ಎಂಬ 6ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ರಾಮದಾಸ್ ಪೈ ಅವರಿಗೆ ಜಾಗತಿಕ ಶೈಕ್ಷಣಿಕ ದೃಷ್ಟಿಕೋನವಿದೆ, ಅವರ ಈ ದೂರದರ್ಶಿತ್ವದ ಪರಿಣಾಮವಾಗಿ ಮಣಿಪಾಲದಲ್ಲಿ ಮೌಲ್ಯಗಳ ಅಡಿಪಾಯದ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಇದು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಗಳನ್ನು ನೀಡಬಲ್ಲುದು ಎಂದು ಶ್ಲಾಘಿಸಿದ ಅವರು, ಆಸ್ಟ್ರಿಯಾವು ಮಾಹೆಯ ಜೊತೆಯಾಗಿ ಸಾಗಬಯಸುತ್ತದೆ ಎಂದರು.ಆಸ್ಟ್ರೀಯಾದಲ್ಲಿ ಭಾರತವು ಉದಯಿಸುತ್ತಿರುವ ರಾಷ್ಟ್ರ ಎಂದು ಕರೆಯಲಾಗುತ್ತದೆ, ಆದರೆ ನಾನು ಅದನ್ನು ಸರಿ ಪಡಿಸುತಿದ್ದೇನೆ, ಭಾರತವು ಈಗಾಗಲೇ ಉದಯವಾಗಿರುವ ರಾಷ್ಟ್ರವಾಗಿದೆ, ಜಗತ್ತು ಇದನ್ನು ಗಮನಿಸಬೇಕು ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕೆನಡದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಜಾನ್ ಎಚ್.ವಿ, ಗಿಲ್ಬರ್ಟ್ ಅವರು, ಸುಸ್ಥಿರ ಆಹಾರ ಪದ್ಧತಿ, ಶೂನ್ಯ ತ್ಯಾಜ್ಯ ಉತ್ಪಾದನೆ ಮತ್ತು ಕೊಳ್ಳುಬಾಕತನಗಳ ಬಗ್ಗೆ ತೀವ್ರವಾಗಿ ಆಲೋಚಿಸಬೇಕಾದ ಕಾಲದಲ್ಲಿದ್ದೇವೆ ಎಂದು ಎಚ್ಚರಿಸಿದರು.

ಮಾಹೆಯ ಉಪಕುಲಪತಿ ಲೆ.ಜ. ಡಾ. ಎಂ. ಡಿ. ವೆಂಕಟೇಶ್ ಪ್ರಾಸ್ತಾವಿಕ ಮಾತನಾಡಿ, ಡಾ. ರಾಮದಾಸ್ ಪೈ ಅವರ 90 ವರ್ಷಾಚರಣೆ ಎಂದರೆ ಅದು ಭಾರತೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಒಂಬತ್ತು ದಶಕಗಳ ಪರಿವರ್ತನಾ ನಾಯಕತ್ವವನ್ನು ಸಂಭ್ರಮಿಸುವುದಾಗಿದೆ ಎಂದರು.

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್, ಸಂಯೋಜಕ ಡಾ. ಅಭಿಷೇಕ್ ಚತುರ್ವೇದಿ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅಭಿಜಿತ್ ಶ್ಯಾನುಭಾಗ್ ಮತ್ತು ಅರ್ನಾಲ್ಡ್ ಮೋಕ್ಷಿತ್ ಅಮ್ಮನ್ನ ವೇದಿಕೆಯಲ್ಲಿದ್ದರು.33 ಮೆ.ವ್ಯಾ. ವಿದ್ಯುತ್ ಉತ್ಪಾದನೆ

ಮಾಹೆ ವಿ.ವಿ.ಯು ಸುಸ್ಥಿರತೆಯೇ ಜೀವನ ಮಾರ್ಗ ಎಂಬ ಆದರ್ಶದೊಂದಿಗೆ ಮುನ್ನಡೆಯುತ್ತಿದ್ದು, ರೆಡ್ಯೂಸ್, ರಿಯ್ಯೂಸ್, ರಿಸೈಕಲ್‌ಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ದೇಶದಾದ್ಯಂತ ಇರುವ ಮಾಹೆಯ ಅಂಗಸಂಸ್ಥೆಗಳಲ್ಲಿ 130 ಕೋಟಿ ರು. ವೆಚ್ಚದಲ್ಲಿ 33 ಮೆಗಾವ್ಯಾಟ್ ಪರ್ಯಾಯ ವಿದ್ಯುತ್ ಉದ್ಪಾದನೆ ಯೋಜನೆ ಹಾಕಿಕೊಳ್ಳಲಾಗಿದೆ, 2040ರೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಹೇಳಿದರು.