ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ನೀರು ಕುದುರಿಗೆ ಬಲಿಯಾದ ಬೆನ್ನಲ್ಲೇ ಶನಿವಾರ ಝೂ ಪ್ರಾಧಿಕಾರದ ಅಧ್ಯಕ್ಷ ರಂಗನಾಥ ಹಾಡ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಕ್ಕೆ ದುಃಖ ಭರಿಸಲು ಸಾಧ್ಯವಾಗುವುದಿಲ್ಲ. ಪುತ್ರಶೋಕ ನಿರಂತರ ಎಂದ ಹಾಗೆ ಮೃತರ ಕುಟುಂಬಕ್ಕೆ ತಗುಲಿದೆ. ನಮ್ಮ ಜೂಗೆ ಬಂದು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಉಂಟಾಗಿದೆ ಎಂದು ತಿಳಿಸಿದರು.

ಈ ಘಟನೆ ಸಂಬಂಧ ಪೊಲೀಸ್ ತನಿಖೆ ಹಾಗೂ ಇಲಾಖೆ ಆರಂಭವಾಗಿದೆ. ಇತ್ತೀಚೆಗೆ ಕೆಲಸಕ್ಕೆ ಸೇರಿದ ಡಾ.ಸಮೀಕ್ಷಾ ರೆಡ್ಡಿ ಝನಲ್ಲಿರುವ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದರು. ಆದರೆ, ಅದೇ ಅವರ ಪ್ರಾಣಕ್ಕೆ ಕುಂದು ತಂದಿರುವುದು ವಿಷಾದನೀಯ. ತನಿಖೆ ಮುಗಿದ ಬಳಿಕ ವರದಿ ಬರಲಿ, ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇಬ್ಬರು ಸಿಬ್ಬಂದಿಯೊಂದಿಗೆ ಬಂದಿದ್ದ ಸಮೀಕ್ಷಾ ರೆಡ್ಡಿ ನೀರಾನೆ ಚಿಕಿತ್ಸೆಗೆ ಮುಂದಾಗಿದ್ದರು. ಅವರು ಕೆರೆಯಲ್ಲಿ ಇಳಿದಾಗ ಹೆಣ್ಣು ನೀರಾನೆ ಹಂಸಿಣಿ ಸಿಟ್ಟಿಗೆದ್ದಿದೆ. ಕಾರಣ ಅದು ಗರ್ಭಿಣಿಯಾಗಿತ್ತು. ಗರ್ಭಿಣಿಯಾಗಿದ್ದಾಗ ಅದು ಊಟ ತಿಂಡಿ ಎಲ್ಲವೂ ಬಿಟ್ಟಿರುತ್ತದೆ. ಇವರನ್ನು ನೋಡಿ ಅದು ರೊಚ್ಚಿಗೆದ್ದಿದ್ದು, ಅವರನ್ನು ಅಟ್ಟಿಸಿಕೊಂಡು ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ವೈದ್ಯೆ ಏಣಿ ಏರಿದಿದ್ದಾರೆ. ಆ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ನೀರಾನೆ ಅವರನ್ನು ಕಚ್ಚಿ ಸಾಯಿಸಿದೆ. ಇಲ್ಲಿಗೆ ಬಂದಾಗ ನನಗೆ ವಿಷಯ ತಿಳಿದಿದೆ ಎಂದು ಘಟನೆ ಕುರಿತು ಮಾಹಿತಿ ನೀಡಿದರು.


ಲಯನ್ ಸಫಾರಿಯಲ್ಲಿ ಇರುವ ಪ್ರಾಣಿಗಳ ಮೇಲೆ ಅದರಲ್ಲೂ ವಿಶೇಷವಾಗಿ ನೀರಾನೆ ಮೇಲಿನ ಪ್ರೀತಿಯಿಂದಾಗಿ ನೀರಾನೆ ಕೇಜಿನೊಳಗೆ ಪ್ರವೇಶಿಸಿದ್ದರು ಎಂದು ತಿಳಿದು ಬಂದಿದೆ. ನಾನು ಡಾ.ಸಮೀಕ್ಣಾ ರೆಡ್ಡಿರವರ ಅಂತಿಮ ನಮನ ಸಲ್ಲಿಸಿ ಬಂದಿದ್ದೇನೆ‌. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಬೇಕಿದೆ. ಅವರ ತಂದೆ-ತಾಯಿಗೆ ಸಮೀಕ್ಷಾ ರೆಡ್ಡಿ ಒಬ್ಬಳೇ ಮಗಳು. ಮಗಳನ್ನು ಕಳೆದುಕೊಂಡ ಅವರ ಕುಟುಂಬ ಸಾಕಷ್ಟು ದುಃಖದಲ್ಲಿದೆ ಎಂದರು.

ನಾನು ಇಲ್ಲಿ ಬಂದು ಸ್ಥಳವನ್ನು ನೋಡಿದ್ದೇನೆ. ಇಲ್ಲಿ ಅವರು ಯಾರ ಜತೆ ಬಂದಿದ್ದರು ಎಂಬುದರ ಕುರಿತು ತನಿಖೆಯಿಂದ ಹೊರ ಬರುತ್ತದೆ. ನಮ್ಮ ಮೃಗಾಲಯದಲ್ಲಿ ಪಶು ವೈದ್ಯರ ಕೊರತೆ ಇದೆ. ಇಲ್ಲಿ ಎಲ್ಲಾ ಕಡೆ ಈಗ ಪಶು ವೈದ್ಯರನ್ನು ತೆಗೆದುಕೊಳ್ಳಬೇಕಿದೆ. ಹಿಂದಿನ ವೈದ್ಯಾಧಿಕಾರಿ ಡಾ.ಮುರುಳಿ‌ ಮನೋಹರ್ ರಾಜೀನಾಮೆ ನೀಡಿ ನಾಲ್ಕು ತಿಂಗಳಾಗಿದೆ. ಇದುವರೆಗೂ ಹೊಸ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಂಡಿಲ್ಲ. ಈ ಕುರಿತು ನನ್ನ ಗಮನಕ್ಕೆ ಈಗ ಬಂದಿದೆ. ವೈದ್ಯೆ ಸಾವಿನ ಘಟನೆ ಕುರಿತು ಸರ್ಕಾರ ಅರಣ್ಯ ಇಲಾಖೆಯ ಸಮಿತಿ ರಚನೆ ಮಾಡಿದೆ. ಇದು ಏಳು ದಿನಗಳ ಒಳಗೆ ವರದಿ ನೀಡಬೇಕಿದೆ. ಅಲ್ಲದೆ ಪೊಲೀಸರ ತನಿಖೆ ಸಹ ನಡೆಸುತ್ತಿದೆ.‌ ಇದರಿಂದ ಸತ್ಯಾಂಶ ಹೊರಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬನ್ನೇರುಘಟ್ಟದಲ್ಲಿ ಇರುವ ಆನೆ ಮರಿಗೆ ಡಾ.ಸಮೀಕ್ಷಾ ರೆಡ್ಡಿರವರ ಹೆಸರಿಡಲು ಚಿಂತಿಸಲಾಗುತ್ತಿದೆ. ಒಂದು ವೇಳೆ ಹಂಸಿಣಿಗೆ ಹೆಣ್ಣು ಮರಿ ಜನನವಾದರೆ ಸಮೀಕ್ಷಾ ಎಂದು ಹೆಸರಿಡಲಾಗುವುದು ಎಂದು ಈ ಸಂದರ್ಭ ತಿಳಿಸಿದರು.