ಬ್ರಹ್ಮಾಂಡ ಸೃಷ್ಟಿಸುವ ಶಕ್ತಿ ತೋರಿಸಿದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌: ಜಿ.ಮಂಜು

| Published : Sep 06 2024, 01:10 AM IST

ಬ್ರಹ್ಮಾಂಡ ಸೃಷ್ಟಿಸುವ ಶಕ್ತಿ ತೋರಿಸಿದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌: ಜಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೋರ್ವರ ಗುರಿಯ ಹಿಂದೆ ಗುರುವಿನ ಶ್ರಮವಿದೆ. ಗುರುವಿಲ್ಲದ ವಿದ್ಯೆ ಅರೆಬೆಂದ ಮಡಿಕೆಯಂತೆ. ಗುರುವೇ ನಮಗೆ ಸರ್ವಸ್ವ. ಮನೆಯಲ್ಲಿ ತಾಯಿ ಮೊದಲ ಗುರುವಾದರೆ, ಭವಿಷ್ಯದ ಬದುಕಿನ ಪಾಠಕ್ಕೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಶಿಕ್ಷಕ ಎಂಬ ಮೂರು ಅಕ್ಷರದಲ್ಲಿ ಸುಂದರ ಸಮಾಜದ ಬ್ರಹ್ಮಾಂಡವನ್ನು ಸೃಷ್ಟಿಸುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಎಂದು ಸಮಾಜ ಸೇವಕ ಜಿ.ಮಂಜು ಅಭಿಪ್ರಾಯಪಟ್ಟರು.

ಹೋಬಳಿಯ ಗಂಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಹ ಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಒಂದು ಶಾಲೆ ಇಡೀ ಗ್ರಾಮದ ಸ್ಥಿತಿ ತೋರಿಸಲಿದೆ. ಇದರ ಹಿಂದೆ ಇರುವ ಶಿಕ್ಷಕರ ಪರಿಶ್ರಮ ಗ್ರಾಮದ ಸುಂದರ ಬದುಕಾಗಿದೆ. ಶಿಕ್ಷಕರು ಭವ್ಯ ಸಮಾಜದ ಶಿಲ್ಪಿಗಳು ಎಂಬುದನ್ನು ಮರೆಯದೆ ತಮ್ಮೂರಿನ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಡಿ ಎಂದು ವಿನಂತಿಸಿದರು.

ಪ್ರತಿಯೋರ್ವರ ಗುರಿಯ ಹಿಂದೆ ಗುರುವಿನ ಶ್ರಮವಿದೆ. ಗುರುವಿಲ್ಲದ ವಿದ್ಯೆ ಅರೆಬೆಂದ ಮಡಿಕೆಯಂತೆ. ಗುರುವೇ ನಮಗೆ ಸರ್ವಸ್ವ. ಮನೆಯಲ್ಲಿ ತಾಯಿ ಮೊದಲ ಗುರುವಾದರೆ, ಭವಿಷ್ಯದ ಬದುಕಿನ ಪಾಠಕ್ಕೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಅವಶ್ಯವಿದ್ದು ಇದಕ್ಕೆ ಸಾಕಾರ ಮೂರ್ತಿಯಾಗಿ ಗುರುಗಳು ನಿಲ್ಲುವರು. ದೇವರಂತೆ ಶಿಕ್ಷಕರು ಮಕ್ಕಳಿಗೆ ಓದುವ ಹಸಿವು ಮೂಡಿಸಿ ಪ್ರಾಥಮಿಕ ಶಾಲೆ ಶಿಕ್ಷಣ ಬದುಕಿಗೆ ತಳಪಾಯವಾಗಿದ್ದಾರೆ ಎಂದರು.

ಅನಕ್ಷರತೆ ಸಮಾಜಕ್ಕೆ ಶಾಪ. ಶಿಕ್ಷಣ ಬಡತನ, ಮೌಢ್ಯಎಲ್ಲವನ್ನು ನಿವಾರಿಸಲಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ವಿಶ್ವಕ್ಕೆ ಮಾದರಿಯಾದ ಶಿಕ್ಷಕರಾಗಿದ್ದು ಇವರ ವಿಚಾರಧಾರೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ನುಡಿದರು.

ಮುಖ್ಯಶಿಕ್ಷಕ ಹನುಮಂತ ಭಜಂತ್ರಿ ಮಾತನಾಡಿ, ಶಿಕ್ಷಕ, ತತ್ವಜ್ಞಾನಿ, ರಾಜತಾಂತ್ರಿಕನಾಗಿ, ದೇಶದ ರಾಷ್ಟಪತಿಯಾಗಿ ಗುರು ಶಿಷ್ಯ ಪರಂಪರೆ ತೋರಿಸಿಕೊಟ್ಟವರು ಡಾ.ಸರ್ವಪಲ್ಲಿರಾಧಾಕೃಷ್ಣನ್ ಇವರ ಆದರ್ಶ ಬದುಕು ತಮ್ಮ ವೃತ್ತಿ ಬದುಕಿಗೆ ಆಸರೆಯಾಗಿದೆ ಎಂದರು.

ಮಕ್ಕಳು ಗುರುಗಳಿಗೆ ಉಡುಗೊರೆ ನೀಡಿ ಖುಷಿಪಟ್ಟರು. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಿಕ್ಷಕ ನಟೇಶ್‌ ಹಾಜರಿದ್ದರು.