ಸಾರಾಂಶ
ಗಗನಕ್ಕೇರಿದ ಬೆಲೆಗಳ ಅಬ್ಬರದಲ್ಲಿ ಈ ಬಾರಿ ಗೌರಿ ಗಣೇಶನನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ.ನಾಡಿನೆಲ್ಲೆಡೆ ವಿಘ್ನ ನಿವಾರಕನನ್ನು ಸ್ವಾಗತಿಸಲು ಜನತೆ ಸಜ್ಜಗಿದ್ದಾರೆ. ಆದರೆ ಜೇಬು ಸುಡುತ್ತಿರುವ ಹೂ,ಹಣ್ಣು, ತರಕಾರಿ ಬೆಲೆ ಜನರನ್ನು ತಬ್ಬಿಬ್ಬುಗೊಳಿಸಿದೆ.
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ : ಗಗನಕ್ಕೇರಿದ ಬೆಲೆಗಳ ಅಬ್ಬರದಲ್ಲಿ ಈ ಬಾರಿ ಗೌರಿ ಗಣೇಶನನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ.ನಾಡಿನೆಲ್ಲೆಡೆ ವಿಘ್ನ ನಿವಾರಕನನ್ನು ಸ್ವಾಗತಿಸಲು ಜನತೆ ಸಜ್ಜಗಿದ್ದಾರೆ. ಆದರೆ ಜೇಬು ಸುಡುತ್ತಿರುವ ಹೂ,ಹಣ್ಣು, ತರಕಾರಿ ಬೆಲೆ ಜನರನ್ನು ತಬ್ಬಿಬ್ಬುಗೊಳಿಸಿದೆ.
ದಿನಸಿ ಇತ್ಯಾದಿ ವಸ್ತುಗಳಲ್ಲಿ ಗಣನೀಯ ಏರಿಕೆ ಕಾಣದಿದ್ದರೂ ಕೆಲ ಅಗತ್ಯ ವಸ್ತುಗಳ ಬೆಲೆ, ಗಣಪ ಮೂರ್ತಿಗಳ ಬೆಲೆ ದಿಢೀರನೇ ಏರಿಕೆ ಕಂಡಿದೆ. ಅಲಂಕಾರ ವಸ್ತುಗಳು, ಹೂಗಳು, ತಳಿರು-ತೋರಣಗಳು ಕೈಸುಡುತ್ತಿವೆ.
ಕೈಸುಡುವ ಮಾರುಕಟ್ಟೆ:
ಹಬ್ಬದ ಮಾರುಕಟ್ಟೆ ಅಕ್ಷರಶಃ ಕೈಸುಡುತ್ತಿದೆ. ಇಲ್ಲಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಮಾರಾಟದ ಅಬ್ಬರ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿದೆ. ಕಾಕಡ ಮತ್ತು ಮಲ್ಲಿಗೆ ಹೂಗಳ ಧಾರಣೆ ಕೆಜಿಗೆ ರು.500 ಮುಟ್ಟಿದೆ. ಕನಕಾಂಬರ ಹೂ 1 ಸಾವಿರದ ಗಡಿದಾಟಿದೆ. ಸೇವಂತಿಗೆ, ಬಟನ್ಸ್ ಸೇರಿದಂತೆ ಪೂಜಾ ಹೂಗಳು ಕೂಡ ಕೆಜಿಗೆ 200-250ರ ಆಸುಪಾಸು ಮಾರಾಟವಾಗುತ್ತಿದೆ. ಅಲಂಕಾರಿಕ ಹೂಗುಚ್ಚಗಳು 80 ರಿಂದ 200 ರುಗಳವರೆಗೆ ಧಾರಣೆ ಇದೆ. ಇನ್ನು ಹಣ್ಣುಗಳ ಪೈಕಿ ಬಾಳೆಹಣ್ಣು 50 ರು, ಸೇಬು ಕೆಜಿಗೆ 200, ದಾಳಿಂಬೆ ಕೆಜಿಗೆ 200 ದಾಟಿದೆ. ಹೀಗೆ ಎಲ್ಲ ಬಗೆಯ ಹಣ್ಣುಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ತಾವರೆ ಮತ್ತು ಡಾಲಿಯ ಹೂಗಳು 20ರುಗಳಿಗೆ ಕಡಿಮೆ ಇಲ್ಲ.
ಗಣಪ ಮೂರ್ತಿಗಳ ಬೆಲೆ ಏರಿಕೆ:
ಗಣಪ ಮೂರ್ತಿಗಳ ಬೆಲೆ ಕಳೆದ ಬಾರಿಗಿಂತ ಗಣನೀಯವಾಗಿ ಏರಿಕೆಯಾಗಿದೆ. 1 ಅಡಿ ಎತ್ತರದ ಸಣ್ಣ ವಿಗ್ರಹಗಳೂ ಕನಿಷ್ಠ 150 ರಿಂದ 250 ರುಗಳಾಗಿದೆ. ತರಾವರಿ ಗಣೇಶ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಪರಿಸರಸ್ನೇಹಿ ಹೆಸರಿನಲ್ಲಿ ಬಣ್ಣದ ಗಣೇಶಗಳ ಭರಾಟೆ ಹೆಚ್ಚಿದೆ. ನೈಜ ಪರಿಸರಸ್ನೇಹಿ ಗಣಪತಿ ಮೂರ್ತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಇರಲಿಲ್ಲ. ಬಣ್ಣದ ಗಣೇಶ ಮೂರ್ತಿಗಳು ಈ ಬಾರಿ ಮಾರಾಟಗಾರನಲ್ಲಿ ಹರ್ಷ ಮೂಡಿಸಿದ್ದರೆ ಗ್ರಾಹಕನ ಜೇಬಿಗೆ ದೊಡ್ಡ ಕತ್ತರಿಯನ್ನೇ ಹಾಕಿವೆ.
ಇಲ್ಲಿನ ತಿಮ್ಮನಕುಂಟೆ ಏರಿಯ ರುಮಾಲೆ ಚನ್ನಬಸವಯ್ಯ ರಸ್ತೆಯಲ್ಲಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಹತ್ತಾರು ಗ್ರಾಹಕರು ತಮ್ಮ ಅಂಗಡಿಗಳನ್ನು ತೆರೆದು ಗಣಪ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಗುರುವಾರ ಸಂಜೆ ಗಣೇಶ-ಗೌರಿ ವಿಗ್ರಹಗಳ ಮಾರಾಟ ಭರಾಟೆ ಹೆಚ್ಚಿತ್ತು.
ಪರಿಸರ ಸ್ನೇಹಿ ಗಣೇಶಮೂರ್ತಿಗಳ ಬಳಕೆಗೆ ಆದ್ಯತೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೃತಕ ಬಣ್ಣಗಳಿಂದ ತಯಾರಿಸಿರುವ ಗೌರಿ ಹಾಗೂ ಗಣೇಶಮೂರ್ತಿಗಳನ್ನು ಬಳಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕು ಎಂದು ಜಿಲ್ಲಾಡಳಿತ ಮಾರ್ಗದರ್ಶನ ನೀಡಿದೆ.ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಕೆರೆ, ಬಾವಿ ಹಾಗೂ ಇತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೀರು ಕಲುಷಿತವಾಗಿ, ಜಲಚರಗಳಿಗೆ ಹಾನಿಯುಂಟಾಗುವುದರಿಂದ ಹಬ್ಬದ ಆಚರಣೆಗೆ ಬಣ್ಣರಹಿತ ಮಣ್ಣಿನ ಗಣಪನ ಆರಾಧನೆ ಮಾಡುವ ಮೂಲಕ ಪರಿಸರಸ್ನೇಹಿ ಹಬ್ಬ ಆಚರಿಸಬೇಕು ಹಾಗೂ ಎಲ್ಲಾ ಕರೆಗಳಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸೂಚಿಸಲಾಗಿರುವ ನಿರ್ದಿಷ್ಟ ಕೆರೆಗಳಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದು ಸೂಚಿಸಲಾಗಿದೆ.
ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ ಗಣೇಶ ಪ್ರತಿಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ಪರವಾನಿಗೆಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ಸೂಕ್ತ ಕ್ರಮ ಕೈಗೊಂಡಿವೆ. ಗಣೇಶೋತ್ಸವ ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ಪರವಾನಿಗೆಯನ್ನು ನೀಡುತ್ತಿವೆ.
ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ
ಗಣೇಶ ಹಬ್ಬದ ಹಿನ್ನಲೆ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡಬೆಳವಂಗಲ, ಹೊಸಹಳ್ಳಿ ಪೊಲೀಸ್‌ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ಸೌಹಾರ್ದಯುತ ಹಬ್ಬ ಆಚರಣೆಗೆ ಜಾಗೃತಿ ಮೂಡಿಸಿದರು.