ಗುರುವಿನ ಸ್ಫೂರ್ತಿ ಇಲ್ಲದೇ ಸಾಧನೆ ಅಸಾಧ್ಯ: ವಿಜಯಾನಂದ ಸ್ವಾಮೀಜಿ

| Published : Sep 06 2024, 01:10 AM IST

ಸಾರಾಂಶ

ಇಲ್ಲಿಯ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಗುರುವಾರ ನೂತನವಾಗಿ ಅಸ್ಥಿತ್ವಕ್ಕೆ ಬಂದ ಧಾರವಾಡ ಟ್ಯುಟೋರಿಯಲ್ ಅಸೋಶಿಯೇಶನ್‌ ಉದ್ಘಾಟನೆ, ಗುರು ಕುಂಜ ಲೋಕಾರ್ಪಣೆ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಹಿರಿಯ ಶಿಕ್ಷಕರಿಗೆ ಗೌರವ ಮತ್ತು ಗುರು ಆಶೀರ್ವಾದ ಕಾರ್ಯಕ್ರಮ ನಡೆಯಿತು.

ಧಾರವಾಡ: ಗುರುವಿನ ಸ್ಫೂರ್ತಿ ಇಲ್ಲದೇ ಯಾವುದೇ ಸಾಧನೆ ಅಸಾಧ್ಯ. ಗುರುವಿನ ಆಶೀರ್ವಾದ, ಸ್ಪರ್ಶದಿಂದ ಜೀವನ ಸಾರ್ಥಕವಾಗಲಿದ್ದು, ಅಂತಹ ಗುರುವಿಗೆ ಶಿಷ್ಯರು ಮಾಡುವ ಗೌರವ ಸಮಾಜಕ್ಕೆ ಮಾದರಿ ಎಂದು ರಾಮಕೃಷ್ಣ ಆಶ್ರಮದ ವಿಜಯಾನಂದ ಸ್ವಾಮೀಜಿ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಗುರುವಾರ ನಡೆದ ನೂತನವಾಗಿ ಅಸ್ಥಿತ್ವಕ್ಕೆ ಬಂದ ಧಾರವಾಡ ಟ್ಯುಟೋರಿಯಲ್ ಅಸೋಶಿಯೇಶನ್‌ ಉದ್ಘಾಟನೆ, ಗುರು ಕುಂಜ ಲೋಕಾರ್ಪಣೆ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಹಿರಿಯ ಶಿಕ್ಷಕರಿಗೆ ಗೌರವ ಮತ್ತು ಗುರು ಆಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ದೇಶ ಬಲಿಷ್ಠ ಹಾಗೂ ಶ್ರೇಷ್ಠ ಎನಿಸಿಕೊಳ್ಳಲು ಅಲ್ಲಿನ ಸಿರಿ ಸಂಪತ್ತು ಮಾನದಂಡವಲ್ಲ. ಅಲ್ಲಿನ ಜ್ಞಾನಿಗಳು, ತ್ಯಾಗಿಗಳು ಹಾಗೂ ಸೇವಾ ಕಾರ್ಯಕರ್ತರು ಎಷ್ಟಿದ್ದಾರೆ ಎಂಬುದರ ಮೇಲೆ ಆ ದೇಶದ ಗೌರವ ನಿಲ್ಲುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆ ಜ್ಞಾನಿ, ತ್ಯಾಗಿ, ಸೇವಾ ಕಾರ್ಯಕರ್ತರು ಸೇರಿದಂತೆ ಚಿಂತರಕನ್ನು ಸಿದ್ಧ ಮಾಡುವ ಕಾಯಕ ಶಿಕ್ಷಕರದ್ದು. ಸಮಾಜದಲ್ಲಿ ಎಂತಹ ದೊಡ್ಡ ಹುದ್ದೆಯಲ್ಲಿದ್ದರೂ ಆತ ಶಿಕ್ಷಕರ ಸ್ಫೂರ್ತಿಯಿಂದಲೇ ಆ ಹುದ್ದೆ ತಲುಪಿರುತ್ತಾನೆ. ಆದ್ದರಿಂದಲೇ ಸಮರ್ಥ ಶಿಕ್ಷಕ, ರಾಷ್ಟ್ರ ರಕ್ಷಕ ಎನ್ನುತ್ತಾರೆ ಎಂದರು.

80 ವಯ್ಸಸು ಮೇಲ್ಪಟ್ಟ, ನಿವೃತ್ತ ಶಿಕ್ಷಕರಾದ ಶ್ರೀಧರ ದೀಕ್ಷೀತ, ಡಾ. ಮಾರ್ಕಾಂಡೇಯ ದೊಡಮನಿ, ಹರ್ಷ ಡಂಬಳ, ನಿಂಗಣ್ಣ ಕುಂಠಿ, ಎನ್‌.ಜಿ. ಗಲಗಲಿ, ಪದ್ಮಾ ಗಲಗಲಿ, ಶರಣಪ್ಪ ಬಾದವಾಡಗಿ, ಎನ್‌.ಎಂ. ಪಾಟೀಲ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯ ಶಿಕ್ಷಕರನ್ನು ಗೌರವಿಸಲಾಯಿತು. ಜೊತೆಗೆ ಆ ಶಿಕ್ಷಕರಿಂದ ಕಾರ್ಯಕ್ರಮ ಸಂಯೋಜಕರು ಗುರು ಆಶೀರ್ವಾದ ಪಡೆದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅವರಿಂದ ಬೆಲ್ಲದ, ಹಿರಿಯ ಆಶೀರ್ವಾದ ಪಡೆಯುವ ಸೌಭಾಗ್ಯ ಈ ಕಾರ್ಯಕ್ರಮ ಮೂಲಕ ತಮಗೆ ದೊರೆಯಿತು. ಈ ಕಾರ್ಯಕ್ರಮ ಈಗಿನ ಶಿಕ್ಷಕರಿಗೆ ಪ್ರೇರಣೆ ಆಗಲಿದೆ. ಆಗಿನ ಶಿಕ್ಷಕರು ಬರೀ ಶಿಕ್ಷಣ ಮಾತ್ರವಲ್ಲದೇ ಜೀವನ ಪಾಠ ಸಹ ಕಲಿಸುತ್ತಿದ್ದರು. ಈಗ ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಈಗಿನ ಶಿಕ್ಷಕರು ಮಕ್ಕಳಿಗೆ ಜೀವನ ಮೌಲ್ಯ ಕಲಿಸಬೇಕಿದೆ ಎಂದರು.

ಧಾರವಾಡದ ಕೆಸಿಡಿಯಿಂದ ಶ್ರೀನಗರ ವರೆಗೆ ಹತ್ತಾರು ಟ್ಯುಟೋರಿಯಲ್‌ಗಳಿದ್ದ ಅಂದಾಜು 80 ಸಾವಿರ ಮಕ್ಕಳು ಓದುತ್ತಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚೆಗೆ ಡ್ರಗ್ಸ್‌ ಹಾವಳಿ ಜಾಸ್ತಿಯಾಗಿದ್ದು ವಿದ್ಯಾರ್ಥಿಗಳಿಗೆ ಟ್ಯುಟೋರಿಯಲ್‌ಗಳು ಶಿಕ್ಷಣದ ಜೊತೆಗೆ ಕೆಟ್ಟ ಹವ್ಯಾಸಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ಅಸೋಸಿಯೇಶನ್ ಅಧ್ಯಕ್ಷ ನಾಗೇಶ ಅಣ್ಣಿಗೇರಿ, ಪ್ರಧಾನ ಕಾರ್ಯದರ್ಶಿ ವಿನಾಯಕ ಜೋಶಿ, ರಿಸಲ್ಟ್‌ ಕನಸಲ್ಟೆನ್ಸಿ ಸರ್ವೀಸ್‌ನ ಸುಧೀಂದ್ರ ದೇಶಪಾಂಡೆ, ಸಂಯೋಜಕರಾದ ನಾಗರಾಜ ತಿಗಡಿ, ಮಲ್ಲನಗೌಡ ಗುಬ್ಬಿ, ಎನ್‌.ಎಂ. ಪಾಟೀಲ, ಶಿಕ್ಷಣ ಇಲಾಖೆಯ ಮಂಜುನಾಥ ಅಡಿವೇರ ಸೇರಿದಂತೆ ಧಾರವಾಡದ ಹಲವು ಟ್ಯುಟೋರಿಯಲ್‌ ನಿರ್ದೇಶಕರುಗಳು ಇದ್ದರು.