ಹೂವಿನಹಡಗಲಿ: ವಿದ್ಯಾರ್ಥಿ ದೆಸೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ನಿರಂತರ ಅಭ್ಯಾಸ ಮಾಡಿ ಉನ್ನತ ಹುದ್ದೆಗಾಗಿ ಹೆಚ್ಚು ಶ್ರಮಿಸಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಗೋಣಿಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ತಾಲೂಕು ಮಟ್ಟದ ಬಣಜಿಗ ಸಮಾಜದ ಮಕ್ಕಳ ಪ್ರತಿಬಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡುತ್ತಿದ್ದಾರೆ. ಪದವಿ ಪಡೆದ ಅನೇಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ಪಾಲಕರು ಮಕ್ಕಳಿಗೆ ಹೆಚ್ಚಿನ ಮಟ್ಟದ ಅಂಕಗಳನ್ನು ತೆಗೆಯುವಂತೆ ಒತ್ತಡ ಹಾಕಬಾರದು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕೂಡಿಸಬೇಕೆಂದು ಹೇಳಿದರು.

ತಾಲೂಕಿನಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಅನುಕೂಲವಾಗುವಂತೆ ಜೂ.2ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ನಿರುದ್ಯೋಗಿ ಯುವಕರು ಈ ಕಾರ್ಯಕ್ರಮದ ಸದ್ಬಳಕೆ ಪಡೆದುಕೊಳ್ಳಬೇಕೆಂದು ಹೇಳಿದರು.

ಹಿರೇಮಲ್ಲಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿದರು.


ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಎಂ.ಅಧ್ಯಕ್ಷತೆ ವಹಿಸಿದ್ದರು. ನಂತರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಗುರುಬಸವಪ್ಪ ರೋಡಗಿ, ರಾಜ್ಯ ಕಾರ್ಯದರ್ಶಿ ಶಿವಾನಂದ ನಿಂಗಪ್ಪ ಬಿದರಿ, ರಾಜ್ಯ ಉಪಾಧ್ಯಕ್ಷ ಜವಳಿ ಅಂದಪ್ಪ, ರಾಜ್ಯ ನಿರ್ದೇಶಕ ಮುರುಗೇಶ್ ತುರಕಾಣಿ, ಸಂಸ್ಥಾಪಕ ಅಧ್ಯಕ್ಷ ಡಾ.ಜಂಬಣ್ಣ ಯಲಗಚ್ಚಿನ, ಜಿಲ್ಲಾ ಅಧ್ಯಕ್ಷ ಅಕ್ಕಿ ಬಸವರಾಜ, ತಾಲೂಕು ಕಾರ್ಯದರ್ಶಿ ಜವಳಿ ಮಲ್ಲಿಕಾರ್ಜುನ, ಪ್ರಮುಖರಾದ ಜವಳಿ ಮಲ್ಲಿಕಾರ್ಜುನ, ಹಲಗೇರಿ ಶಿವಯೋಗೆಪ್ಪ, ವಿದ್ಯಾ ಯಳಮಲಿ ಇದ್ದರು.