ಸಾರಾಂಶ
ಬಿಜಿಕೆರೆ ಬಸವರಾಜ
ಕನ್ನಡ ಪ್ರಭ ವಾರ್ತೆ, ಮೊಳಕಾಲ್ಮುರುಕೈಮಗ್ಗ ರೇಷ್ಮೆ ಸೀರೆಗಳಿಗೆ ರಾಜ್ಯದಲ್ಲಷ್ಟೇ ಏಕೆ ದೇಶ-ವಿದೇಶದಲ್ಲೂ ಹೆಸರುವಾಸಿ ಮೊಳಕಾಲ್ಮುರು. ಆದರೆ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಮತ್ತು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕಾದ ಇಲಾಖೆ ಮಾತ್ರ ಖಾಲಿ ಖಾಲಿ.ಹೌದು, ಇಲ್ಲಿರುವ ತಾಲೂಕು ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿಗಳ ಕಚೇರಿ ಕಳೆದೆರಡು ದಶಕದಿಂದ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಹೀಗಾಗಿ ತಾಲೂಕಿನಲ್ಲಿ ರೇಷ್ಮೆ ಕೃಷಿ ವಿಸ್ತರಣೆ ನಿಸ್ತೇಜಗೊಂಡಿದೆ. ದೇವಸಮುದ್ರ ಹಾಗೂ ಕಸಬಾ ಹೋಬಳಿ ಒಳಗೊಂಡು ಮೊಳಕಾಲ್ಮುರು ತಾಲೂಕು ಕೈಮಗ್ಗ ರೇಷ್ಮೆ ಸೀರೆಗಳ ವ್ಯಾಪಾರದಿಂದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೂ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ವಿಸ್ತರಣಾಧಿಕಾರಿ ಕಚೇರಿಯಲ್ಲಿ ಮುಂಜೂರಾಗಿರುವ 13 ಹುದ್ದೆ ಪೈಕಿ ಕೇವಲ1 ಹುದ್ದೆ ಮಾತ್ರ ಭರ್ತಿಯಾಗಿದ್ದು, ಉಳಿದ 12 ಹುದ್ದೆ ಕಳೆದೆರಡು ದಶಕದಿಂದ ಖಾಲಿ ಇವೆ. ಇರುವ ಒಬ್ಬ ವಿಸ್ತರಣಾಧಿಕಾರಿಗೆ ಜಿಲ್ಲೆ, ತಾಲೂಕು ಮಟ್ಟ ಹಾಗೂ ವಿ.ಸಿ.ಸೇರಿದಂತೆ ಇಲಾಖಾಧಿಕಾರಿಗಳ ಸಭೆಗಳಿಗೆ ತೆರಳಿದರೆ ಕಚೇರಿ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಸಾಮಾನ್ಯ ಸಭೆ, ಚುನಾವಣಾ ಸಭೆ ಸೇರಿದಂತೆ ವಿವಿಧ ಸಭೆಗಳಿಗೆ ಅಧಿಕಾರಿ ತೆರಳುವುದರಿಂದ ರೇಷ್ಮೆ ಬೆಳೆಗಾರರಿಗೆ ಸೌಲಭ್ಯ ಮರೀಚಿಕೆ ಯಾಗುತ್ತಿವೆ.2022-23 ನೇ ಸಾಲಿನಲ್ಲಿ ತಾಲೂಕಿನ 503 ರೇಷ್ಮೆ ಬೆಳೆಗಾರರು ಒಟ್ಟು 576 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಿದ್ದಾರೆ. 5,03,500 ರೇಷ್ಮೆ ಹುಳು ಚಾಕಿ ಗುರಿ ಹೊಂದಿದ್ದು 5,08,100 ಪ್ರಗತಿಯಾಗಿ ಶೇ. 90 ರಷ್ಟು ಗುರಿ ಸಾಧನೆಯಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡಲ್ಲಿ ತೀವ್ರ ಬರದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ರೇಷ್ಮೆ ಬೆಳೆ ಅಲ್ಪ ಮಟ್ಟಿಗೆ ಕುಂಠಿತಗೊಂಡಿದೆ ಎನ್ನುವುದು ರೈತರ ಅಭಿಪ್ರಾಯ.
ಡ್ರಿಪ್, ರೇಷ್ಮೆ ಮನೆ ಸಹಾಯ ಧನ, ನರೇಗ ನಾಟಿ ಮಾಡಿಕೊಂಡಲ್ಲಿ ಚಂದ್ರಿಕೆ, ಔಷಧ ಸಿಂಪಡಣೆ ವಾಹನ ಮೊದಲೇ ಇಲ್ಲ. ಎರಡೂ ಹೋಬಳಿಯ ಹಳ್ಳಿಗಳ ರೈತರ ಬಳಿ ಹೋಗುವುದು ಕಷ್ಟವಾಗಿದೆ.ಚಳ್ಳಕೆರೆ ಮತ್ತು ಮೊಳಕಾಲ್ಮುರು ಸೇರಿ ಎರಡೂ ತಾಲೂಕಿಗೂ ಒಬ್ಬರೇ ಸಹಾಯಕ ನಿರ್ದೇಶಕರಿದ್ದಾರೆ. ಸಿಬ್ಬಂದಿ ಕೊರತೆ ಈಡೇರಿಸಬೇಕೆಂಬ ರೈತರ ಬೇಡಿಕೆ ಇಂದಿಗೂ ಈಡೆರಿಲ್ಲ ಎನ್ನುವ ತೀವ್ರ ಅಸಮಧಾನ ವ್ಯಾಪಕವಾಗಿ ಕೇಳಿಬರುತ್ತಿದ್ದು ರೇಷ್ಮೆ ಬೆಳೆ ವಿಸ್ತರಣೆ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಸಕಾಲಕ್ಕೆ ಸೇವೆ ಸಿಗದೆ ರೈತರು ಪರಡಾದುವ ಸ್ಥಿತಿ ನಿರ್ಮಾಣವಾಗಿದೆ.
ಖಾಲಿ ಹುದ್ದೆಗಳ ವಿವಿರ:ಮೊಳಕಾಲ್ಮೂರು ತಾಲೂಕು ಕೇಂದ್ರ ಕಚೇರಿ ಹಾಗೂ ರಾಯಾಪುರ ಫಾರಂ ಸೇರಿದಂತೆ ಎರಡೂ ಕಡೆಯಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಹುದ್ದೆ ಹೊರತು ಪಡಿಸಿದರೆ ಉಳಿದಂತೆ ಎಲ್ಲಾ ಹುದ್ದೆಗಳು ಖಾಲಿ ಇವೆ. ಪ್ರಸ್ತುತ 5 ರೇಷ್ಮೆ ನಿರೀಕ್ಷಕ, 4 ರೇಷ್ಮೆ ಪ್ರದರ್ಶಕ, 1 ವಾಹನ ಚಾಲಕ, 2 ಗ್ರೂಪ್ ಡಿ ಹುದ್ದೆಗಳು ಖಾಲಿ ಇವೆ.