ಮಾಜಿ ಸಚಿವ ಆಂಜನೇಯಗೆ ಪರಿಷತ್ ಟಿಕೆಟ್ ನೀಡಿ

| Published : May 27 2024, 01:03 AM IST

ಸಾರಾಂಶ

ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನದ ಟಿಕೆಟ್ ನೀಡಬೇಕೆಂದು ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡ ಎಚ್.ಎನ್.ನಾಗರಾಜ್ ಒತ್ತಾಯಿಸಿದ್ದಾರೆ.

- ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡ ಎಚ್.ಎನ್.ನಾಗರಾಜ್ - - - ಕನ್ನಡಪ್ರಭ ವಾರ್ತೆ ಹರಿಹರ

ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸ್ಥಾನದ ಟಿಕೆಟ್ ನೀಡಬೇಕೆಂದು ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡ ಎಚ್.ಎನ್.ನಾಗರಾಜ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಆಂಜನೇಯ ಅವರು ದೃಢವಾಗಿ ಪಕ್ಷದ ಒಗ್ಗಟ್ಟಿಗೆ ಬಲ ತುಂಬಲು ಸದಾ ಸಿದ್ಧರಾಗಿರುವರು. ಅವರಿಗೆ ವಿಧಾನ ಪರಿಷತ್ತು ಚುನಾವಣೆ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕು ಎಂದರು.

ಬಾಲ್ಯದಿಂದಲೇ ಕಾಂಗ್ರೆಸ್ ಅಭಿಮಾನಿಯಾಗಿ, ನಂತರ ಪಕ್ಷದ ಕಾರ್ಯಕರ್ತನಾಗಿ, ದಾವಣಗೆರೆ ನಗರಸಭೆ ಸದಸ್ಯ, ಸೇವಾದಳದ ಅಧ್ಯಕ್ಷ, ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ಹಲವಾರು ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆ ಆಂಜನೇಯ ಅವರ ಸೇವೆಯನ್ನು ಪಕ್ಷದ ಹೈಕಮಾಂಡ್ ಗುರುತಿಸಬೇಕು ಎಂದರು.

ನಗರಸಭೆ ಮಾಜಿ ಸದಸ್ಯ ಎಂ.ಬಿ. ಅಣ್ಣಪ್ಪ ಮಾತನಾಡಿ, ವಿಧಾನ ಪರಿಷತ್ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ೭ ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಅದರಲ್ಲಿ ಒಂದು ಸ್ಥಾನ ಪರಿಶಿಷ್ಟ ಜಾತಿಯ ಕೋಟಾದಲ್ಲಾಗಲಿ ಅಥವಾ ಆದ್ಯತೆಯ ಮೇಲಾಗಲಿ ಎಚ್.ಆಂಜನೇಯರಿಗೆ ನೀಡಬೇಕು ಎಂದರು.

ವಕೀಲ ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಅವರು ಶ್ರೀರಾಮಚಂದ್ರನಂತಿದ್ದರೆ, ಎಚ್.ಆಂಜನೇಯ ರಾಮನ ಬಂಟ ಹನುಮನಿದ್ದಂತೆ. ಯಾವುದೇ ಸಂದರ್ಭದಲ್ಲಿ ಅವರು ಪಕ್ಷವನ್ನು ಕೈ ಬಿಟ್ಟಿಲ್ಲ. ಈ ಬಾರಿ ಪರಿಷತ್‌ಗೆ ಸ್ಥಾನ ಕಲ್ಪಿಸಿಕೊಡುವ ಮೂಲಕ ಚಿಂತಕರ ಚಾವಡಿ ಮೇಲ್ಮನೆಯಲ್ಲಿ ಅವರ ಸೇವೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಬಳಗದ ಕೆ.ಎಸ್. ಅಬ್ದುಲ್ಲಾ, ಕೆಂಚಪ್ಪ, ಹಬೀಬುಲ್ಲಾ ಬೇಗ್, ನಗರಸಭೆ ನಾಮ ನಿರ್ದೇಶೀತ ಸದಸ್ಯ ಸಂತೋಷ್, ಪಿ.ಎನ್.ಆನಂದ, ಎಂ.ಎಚ್. ತಿಪ್ಪೇಸ್ವಾಮಿ ಇತರರಿದ್ದರು.

- - - -೨೬ಎಚ್‌ಆರ್‌ಅರ್೨:

ಹರಿಹರದಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಎಚ್.ಆಂಜನೇಯ ಅಭಿಮಾನಿ ಬಳಗದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ವಿಪ ಟಿಕೆಟ್‌ ನೀಡಲು ಒತ್ತಾಯಿಸಿದರು.