ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಪ್ರಮುಖ ರಸ್ತೆಗಳ ಬದಿಗೆ ಹಾಕಲಾಗಿರುವ ಫುಟ್‌ಪಾತ್‌ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು, ಅಲ್ಲಲ್ಲಿ ವ್ಯಾಪಾರಸ್ಥರು ಅತಿಕ್ರಮಣ ಮಾಡಿದ್ದಾರೆ. ಗೂಡ್ಸ್ ವಾಹನಗಳಿಂದಾಗಿ ಚರಂಡಿಗೆ ಹಾಕಿರುವ ಬ್ಲಾಕ್ಸ್‌ಗಳು ಮುರಿದು ಗುಂಡಿಗಳಂತಾಗಿದ್ದು, ಇವು ಇದೀಗ ಜನರ ಬಲಿಗಾಗಿ ಕಾಯುತ್ತಿವೆ.

ಪಟ್ಟಣದಲ್ಲಿ ಜತ್ತ-ಜಾಂಬೋಟ ಮತ್ತು ಜೇವರ್ಗಿ-ಸಂಕೇಶ್ವರ-2 ಪ್ರಮುಖ ರಾಜ್ಯ ಹೆದ್ದಾರಿಗಳು ಹಾಯ್ದು ಹೋಗಿರುವುದರಿಂದ ಪಟ್ಟಣದಲ್ಲಿ ನಿತ್ಯ ಟ್ರಾಫಿಕ್ ಕಿರಿಕಿರಿ, ಸರಕು ಸಾಗಾಣಿಕೆ ಮತ್ತು ಭಾರೀ ವಾಹನಗಳ ಸಂಚಾರ ನಿರಂತರವಾಗಿದೆ. ಎರಡು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ನಿರ್ಮಿಸಲಾಗಿರುವ ಚರಂಡಿ ಮತ್ತು ಫುಟ್‌ಪಾತ್‌ಗಳು ಸಾರ್ವಜನಿಕರ ಸಂಚಾರಕ್ಕೆ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಈ ಗುಂಡಿಗಳೇ ಸಾಕ್ಷಿ ಎನ್ನುವಂತಾಗಿದೆ. ಪಟ್ಟಣದ ವಿಜಯಪುರ ರಸ್ತೆ, ಗೋಕಾಕ್ ರಸ್ತೆ, ಜತ್ತ ರಸ್ತೆ, ಮಿರಜ್‌ ರಸ್ತೆ, ಐನಾಪುರ ರಸ್ತೆ, ಸತ್ತಿ ರಸ್ತೆ ಸೇರಿದಂತೆ ಅಥಣಿಯ ವಿವಿಧ ರಸ್ತೆಗಳ ಬದಿಗೆ ಹಾಕಲಾಗಿರುವ ಫುಟಪಾತ್‌ಗಳು ಬಲಿಗಾಗಿ ಕಾದು ಕುಳಿತಿರುವಂತೆ ಭಾಸವಾಗುತ್ತಿದೆ. ಇಲ್ಲಿ ಸಂಚರಿಸುವ ಪಾದಚಾರಿಗಳು ಸ್ವಲ್ಪ ಎಚ್ಚರ ತಪ್ಪಿದರೆ ಈ ಗುಂಡಿಗಳಲ್ಲಿ ಜಾರಿ ಬೀಳುವುದು ಗ್ಯಾರಂಟಿ.ಸಾರ್ವಜನಿಕರು ಅಥಣಿ ಪುರಸಭೆ ಅಧಿಕಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಪಟ್ಟಣದಲ್ಲಿ ಇದೇ ಮಾರ್ಗವಾಗಿ ಅನೇಕ ಶಾಲಾ, ಕಾಲೇಜಿನ ಮಕ್ಕಳು, ಮಹಿಳೆಯರು ಸಂಚರಿಸುತ್ತಾರೆ. ಪಟ್ಟಣದಲ್ಲಿ ಈ ಗುಂಡಿಗಳಿಂದ ಅನೇಕ ಬಾರಿ ಅನಾಹುತಗಳು ನಡೆದಿದ್ದು, ಜನರು ಗಾಯಗೊಂಡಿದ್ದಾರೆ.


ಫುಟ್‌ಪಾತ್ ಒತ್ತುವರಿ ಆರೋಪ:

ಪಟ್ಟಣದ ಪ್ರಮುಖ ರಸ್ತೆ ಬದಿಗಿರುವ ವಾಣಿಜ್ಯ ಮಳಿಗೆಯ ವ್ಯಾಪಾರಸ್ಥರು ಸಾರ್ವಜನಿಕ ಸಂಚಾರಕ್ಕಾಗಿ ನಿರ್ಮಿಸಿರುವ ಫುಟಪಾತ್‌ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ವ್ಯಾಪಾರಸ್ಥರ ಸರಕು ವಾಹನಗಳು ಈ ಫುಟ್‌ಪಾತ್‌ಗಳ ಮೇಲೆ ಸಂಚಾರ ಮಾಡುತ್ತಿರುವುದರಿಂದ ಮುರಿದು ಬೀಳುತ್ತಿವೆ. ಅಲ್ಲದೇ, ಮುರಿದುಕೊಳ್ಳುವ ಸ್ಥಿತಿಯಲ್ಲಿ ಬ್ಲಾಕ್‌ಗಳನ್ನು ಅಳವಡಿಸಲಾಗಿದೆ. ಇನ್ನೂ ಕೆಲವು ರಸ್ತೆಗಳಲ್ಲಿ ಸ್ಲಾಬ್ ಹಾಕಲಾಗಿದ್ದು, ತೀರಾ ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ. ವಾಹನದ ಚಕ್ರಗಳು ಹಾಯ್ದು ಮುರಿದು ಬಿದ್ದಿವೆ. ಸಂಬಂಧಪಟ್ಟ ಅಧಿಕಾರಿಗಳು ಅವುಗಳತ್ತ ಗಮನ ಹರಿಸದೆ ಇರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.ಕಾಟಾಚಾರದ ದಾಳಿ:

ಪುರಸಭೆ ಅಧಿಕಾರಿಗಳು ಒತ್ತುವರಿ ಮಾಡಿಕೊಂಡ ವ್ಯಾಪಾರಸ್ಥರಿಗೆ ಇತ್ತೀಚಿಗೆ ಎಚ್ಚರಿಕೆ ನೀಡುವ ಮೂಲಕ ಕೆಲವು ವಸ್ತುಗಳನ್ನು, ಕೊಳ್ಳುವ ಗಾಡಿಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಆದರೆ, ರಾಜಕೀಯ ಒತ್ತಡವೋ ಅಥವಾ ಮಾಮೂಲಿ ಮಹಿಮೆಯೋ..? ಈಗ ಅಧಿಕಾರಿಗಳು ಕಂಡು ಕಾಣದಂತೆ ಮೌನ ವಹಿಸಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ, ಪಾದಚಾರಿಗಳಿಗೆ ಫುಟ್‌ಪಾತ್‌ಗಳು ಮುಕ್ತವಾಗಿಲ್ಲ. ಹೀಗಾಗಿ, ಫುಟ್‌ಪಾರ್‌ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪುರಸಭೆ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪಟ್ಟಣದಲ್ಲಿ ಒತ್ತುವರಿಯಾಗಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇನ್ನೇನು ಮಳೆಗಾಲ ಆರಂಭವಾಗುವ ದಿನಗಳು ಸಮೀಪಸುತ್ತಿದ್ದು, ಪಟ್ಟಣದಲ್ಲಿ ಬಲಿಗಾಗಿ ಕಾಯುತ್ತಿರುವ ಗುಂಡಿಗಳನ್ನು ಕೂಡಲೇ ದುರಸ್ತಿಗೊಳಿಸಿ ಮುಂದೆ ಆಗಲಿರುವ ಅನಾಹುತಗಳನ್ನು ತಡೆಯಬೇಕಿದೆ.

ಅಶೋಕ ಕೆಂಗಣ್ಣವರ,

ಸಾಮಾಜಿಕ ಕಾರ್ಯಕರ್ತರಾಜ್ಯ ಹೆದ್ದಾರಿಗಳ ಪಕ್ಕದ ಚರಂಡಿ ಮತ್ತು ಫುಟ್‌ಪಾತ್‌ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಕೂಡ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವು ಗುಂಡಿಗಳನ್ನು ದುರಸ್ತಿ ಮಾಡಿದ್ದೇವೆ. ಇನ್ನುಳಿದ ಗುಂಡಿಗಳನ್ನು ಸಂಬಂಧಪಟ್ಟ ಹೆದ್ದಾರಿಗಳ ನಿರ್ವಹಣಾಧಿಕಾರಿಗಳಿಗೆ ಮಾತನಾಡಿ ಶೀಘ್ರದಲ್ಲಿಯೇ ದುರಸ್ತಿ ಮಾಡಿಸುತ್ತೇವೆ. ವ್ಯಾಪಾರಸ್ಥರಿಗೆ ಈಗಾಗಲೇ ತಿಳುವಳಿಕೆ ನೀಡಲಾಗಿದ್ದು, ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗುವುದು.

-ಅಶೋಕ ಗುಡಿಮನಿ,
ಪುರಸಭೆ ಮುಖ್ಯಾಧಿಕಾರಿ.