ಸಾರಾಂಶ
ಸತೀಶ ಸಿ.ಎಸ್.
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿಜಿಲ್ಲೆಯ ಪ್ರಮುಖ ನದಿಗಳ ಪ್ರದೇಶಗಳು ಹಾಗೂ ಐತಿಹಾಸಿಕ ಸ್ಥಳಗಳ ಪುನಶ್ಚೇತನಕ್ಕೆ ಜಿಲ್ಲಾಡಳಿತ ಉದ್ಯೋಗ ಖಾತ್ರಿಯಡಿ ಯೋಜನೆ ರೂಪಿಸಿದ್ದು, ತಾಲೂಕಿನ ಕುಮದ್ವತಿ ನದಿ ಒಡಲು ಹಾಗೂ ತ್ರಿಪದಿ ಬ್ರಹ್ಮ ಸರ್ವಜ್ಞನ ಐಕ್ಯಮಂಟವನ್ನು ಸ್ವಚ್ಛಗೊಳಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಖಾತ್ರಿ ಕಾಮಗಾರಿ ವೈರಲ್ ಆಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಮಾಸೂರ ಗ್ರಾಮ ಪಂಚಾಯಿತಿ ವತಿಯಿಂದ ತಾಲೂಕಿನ ಜೀವನಾಡಿಯಾದ ಕುಮದ್ವತಿ ನದಿಯ ಒಡಲನ್ನು ಸಂಪೂರ್ಣ ಸ್ವಚ್ಛಗೊಳಿಸಿ ಹೂಳು ತೆಗೆಯಲಾಗಿದೆ. ತ್ರಿಪದಿ ಬ್ರಹ್ಮ ಸರ್ವಜ್ಞರ ಐಕ್ಯ ಮಂಟಪವನ್ನು ಸ್ವಚ್ಛಗೊಳಿಸಲಾಗಿದೆ. ಈ ಬೇಸಿಗೆ ಸಂದರ್ಭದಲ್ಲಿ ಪ್ರತಿ ನಿತ್ಯ 90ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ನದಿಯಲ್ಲಿ ಬೆಳೆದ ಗಿಡ ಗಂಟೆಗಳು, ಅನಗತ್ಯ ತ್ಯಾಜ್ಯ, ಬಾಟಲಿಗಳ ತೆರವು ಹಾಗೂ ಸುಮಾರು 500 ಮೀಟರ್‌ನಷ್ಟು ನದಿಯ ಹೂಳು ತೆಗೆದು ಸಮತಟ್ಟು ಮಾಡಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕಗೊಳಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಮಾಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ. 2024-25ನೇ ಸಾಲಿನ ಕಾಮಗಾರಿಯಿಂದಾಗಿ 850ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಷ್ಟಿ ಮಾಡಿ 2.5 ಲಕ್ಷಕ್ಕೂ ಹೆಚ್ಚು ಹಣವನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರಿಗೆ ಹಣ ಸಂದಾಯ ಮಾಡಿದ ಪರಿಣಾಮ ಜಿಲ್ಲಾಡಳಿತಕ್ಕೆ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.16ನೇ ಶತಮಾನದ ತ್ರಿಪದಿ ಬ್ರಹ್ಮ, ವರಕವಿ ಸರ್ವಜ್ಞರ ಐಕ್ಯ ಮಂಟಪದ ಸ್ಥಳ ಹಾಗೂ ಸರ್ವಜ್ಞರ ತಂದೆ ಮಾಸೂರಿನ ಬಸವರಸ ಪೂಜಿಸುತ್ತಿದ್ದ ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತ ಹಾಗೂ ಕೋಟೆ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಹರಿದಿರುವ ಪ್ರಮುಖ ನದಿಗಳು ಹಾಗೂ ಐತಿಹಾಸಿಕ ಸ್ಥಳಗಳ ಪುನಶ್ಚೇತನ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿದ್ದೇವೆ. ಇದೀಗ ಮಾಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಾಮಗಾರಿ ಯಶಸ್ವಿಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿದರು.ನರೇಗಾ ಯೋಜನೆಯಡಿ ತಾಲೂಕಿನಾದ್ಯಂತ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಕಾಮಗಾರಿಯನ್ನು ಕೈಗೊಂಡಿದ್ದು, ಮಾಸೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿ ಆ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರಾಗಲು ಸಹಕರಿಸಲಾಗಿದೆ ಎಂದು ತಾಪಂ ಇಒ ಪ್ರವೀಣ ಕಟ್ಟಿ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭವಾದಾಗಿನಿಂದ ನಮ್ಮ ಬದುಕು ಹಸನಾಗಿದೆ. ಈ ಹಿಂದೆ ಬರಗಾಲದಲ್ಲಿ ಕೆಲಸವಿಲ್ಲದೆ ಅರೇ ಹೊಟ್ಟೆಯಲ್ಲಿ ಮಲಗುವಂತಾಗಿತ್ತು. ಈಗ ಮನೆ ಮಂದಿಯಲ್ಲ ನಿರಂತರ ಕೆಲಸ ಮಾಡಿ ಮೂರು ಹೊತ್ತು ನೆಮ್ಮದಿಯಿಂದ ಹೊಟ್ಟೆ ತುಂಬ ಊಟ ಮಾಡುವಂತಾಗಿದೆ ಕೂಲಿ ಕಾರ್ಮಿಕ ಬಸವರಾಜ ಹೇಳಿದರು.