ಒಳಮೀಸಲು ಜಾರಿಗಾಗಿ 12ರಂದು ಡಿಎಸ್‌ಎಸ್‌ ತಮಟೆ ಚಳವಳಿ

| Published : Sep 07 2024, 01:35 AM IST

ಸಾರಾಂಶ

ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯಕ್ಕೆ ಅಧಿಕಾರವಿದೆ ಎಂಬ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಹಿನ್ನೆಲೆ ಒಳಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಸೆ.12ರಂದು ಏಕಕಾಲಕ್ಕೆ ಬೃಹತ್ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಜ್ಯವ್ಯಾಪಿ ಏಕಕಾಲಕ್ಕೆ ಆಯೋಜನೆ: ಮುಖಂಡ ಕುಂದುವಾಡ ಮಂಜುನಾಥ ಮಾಹಿತಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯಕ್ಕೆ ಅಧಿಕಾರವಿದೆ ಎಂಬ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಹಿನ್ನೆಲೆ ಒಳಮೀಸಲಾತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಸೆ.12ರಂದು ಏಕಕಾಲಕ್ಕೆ ಬೃಹತ್ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬೃಹತ್ ತಮಟೆ ಚಳವಳಿಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಳಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಸ್ವಾಗತಾರ್ಹವಾಗಿದೆ. ಈ ತೀರ್ಪನ್ನು ರಾಜ್ಯ ಸರ್ಕಾರ ತಕ್ಷಣ‍ೇ ಅನುಷ್ಠಾನಗೊಳಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬೇಕು ಎಂದರು.

ಎಲ್ಲ ಗೊಂದಲ ಪರಿಹಾರ:

ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪನ್ನು ಮೂಲಕ ಪರಿಶಿಷ್ಟ ಜಾತಿಯ ಶೋಷಿತ ಸಮುದಾಯಗಳಲ್ಲಿ ಭರವಸೆ ಮೂಡಿಸಿದೆ. 3 ದಶಕದಿಂದಲೂ ಡಿಎಸ್‌ಎಸ್‌ ಕೈಗೊಂಡಿದ್ದ ಹೋರಾಟಕ್ಕೆ ಈ ತೀರ್ಪಿನ ಮೂಲಕ ಜಯ ಸಿಕ್ಕಂತಾಗಿದೆ. ಮೀಸಲಾತಿ ವ್ಯವಸ್ಥೆಯಲ್ಲಿ ಇದು ಅತ್ಯಂತ ಮುಖ್ಯವಾಗಿ, ಮಹತ್ವದ ಹೆಜ್ಜೆಯೂ ಆಗಲಿದೆ. ಈ ಹಿಂದೆ ಇದೇ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜೆಐ ಡಿ.ವೈ.ಚಂದ್ರಚೂಡ ಅವರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿದ್ದಂತಹ ಎಲ್ಲ ಗೊಂದಲಗಳನ್ನು ಪರಿಹರಿಸಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ತೀರ್ಪಿನಂತೆ ನಡೆಯಲಿ:

ಒಳಮೀಸಲಾತಿ ನೀಡಿಕೆಯು ಸಂವಿಧಾನ ಕಲ್ಪಿಸಿರುವ ಸಮಾನತೆ ಹಕ್ಕನ್ನು ಉಲ್ಲಂಘಿಸುವುದಿಲ್ಲ. ಪರಿಶಿಷ್ಟ ಜಾತಿಯಲ್ಲಿ ನೂರಾರು ಉಪ ಜಾತಿಗಳಿವೆ. ಒಪ್ಪಿತವಾದ ಮಾನದಂಡಗಳು ಮತ್ತು ವಿಧಾನಗಳ ಮೂಲಕ ತುಲನಾತ್ಮಕವಾಗಿ ಈ ಜಾತಿಗಳ ಹಿಂದುಳಿದಿರುವಿಕೆ ನಿರ್ಣಯಿಸಬೇಕು. ಈ ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಶಿಕ್ಷಣಕ್ಕೆ ಸೀಮಿತವಾಗಿ ಇರಬಾರದು. ಸಾಮಾಜಿಕ ಸ್ಥಾನಮಾನವನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಒಳಮೀಸಲಾತಿ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮಿತಿಯ ದಾವಣಗೆರೆ ತಾಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರ ಸಂಚಾಲಕ ಪಿ.ಜೆ. ಮಹಾಂತೇಶ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಹಾಂತೇಶ ಹಾಲುವರ್ತಿ, ಆರ್.ಮಂಜುನಾಥ, ಲಕ್ಷ್ಮಣ ಕೊಡಗನೂರು, ಕೆಂಚಪ್ಪ, ಹನುಮಂತಪ್ಪ ಗಂಗನಕಟ್ಟೆ, ತಾಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಬಿ.ಚಿತ್ತಾನಹಳ್ಳಿ, ನಗರ ಸಂಚಾಲಕ ಎಸ್.ಎಂ.ಶಿವಶಂಕರ, ಸ್ಲಂ ಸಂಚಾಲಕ ನಾಗರಾಜ ಆನೆಕೊಂಡ ಇತರರು ಇದ್ದರು.

- - -

ಬಾಕ್ಸ್‌ * ರಾಯಣ್ಣ ವೃತ್ತದಿಂದ ಡಿಸಿ ಕಚೇರಿಗೆ ಚಳವಳಿ

ದಾವಣಗೆರೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಡಿಎಸ್‌ಎಸ್‌ ನೇತೃತ್ವದಲ್ಲಿ ಸೆ.12ರಂದು ಬೆಳಗ್ಗೆ 11 ಗಂಟೆಯಿಂದ ಬೃಹತ್ ತಮಟೆ ಚಳವಳಿ ಕೈಗೊಳ್ಳಲಾಗಿದೆ. ಅಂದು ಡಿಎಸ್‌ಎಸ್‌ ನೇತೃತ್ವದಲ್ಲಿ ಮಾದಿಗ ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮಟೆ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಒಳಮೀಸಲಾತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಿದ್ದಾರೆ ಎಂದು ಮಂಜುನಾಥ ತಿಳಿಸಿದರು.

- - - -6ಕೆಡಿವಿಜಿ8:

ದಾವಣಗೆರೆ ಪ್ರವಾಸಿ ಮಂದಿರದಲ್ಲಿ ಒಳ ಮೀಸಲಾತಿಗಾಗಿ ಸೆ.12ರಂದು ಹಮ್ಮಿಕೊಂಡಿರುವ ಬೃಹತ್ ತಮಟೆ ಚಳವಳಿ ಕುರಿತ ಕರಪತ್ರ ಬಿಡುಗಡೆಗೊಳಿಸಲಾಯಿತು.