ಸಾರಾಂಶ
- ಚನ್ನಗಿರಿ ಪಟ್ಟಣದಲ್ಲಿ ವ್ಯಸನಮುಕ್ತ ಸಮಾಜಕ್ಕಾಗಿ ಜನಜಾಗೃತಿ ಜಾಥಾ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಲ್ಲಿ ತಾವರೆಕೆರೆ ಶಿಲಾಮಠ ಮತ್ತು ಯಡೆಯೂರು ಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ಅವರ 77ನೇ ಜನ್ಮ ವರ್ಧಂತಿ ಅಂಗವಾಗಿ ವ್ಯಸನಮುಕ್ತ ಸಮಾಜಕ್ಕಾಗಿ ದುಶ್ಚಟಗಳಿಂದ ದೂರವಿರಿ ಎಂಬ ಘೋಷಣೆಯೊಂದಿಗೆ ಶುಕ್ರವಾರ ಜನ ಜಾಗೃತಿ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿ ಜನತೆಗೆ ಜಾಗೃತಿಯನ್ನು ಮೂಡಿಸಲಾಯಿತು.ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಈ ಸಂದರ್ಭ ಮಾತನಾಡಿ, ಇಂದಿನ ದಿನಗಳಲ್ಲಿ ಮಾದಕ ವಸ್ತುಗಳ ವ್ಯಸನಿಗಳಾಗಿ ತಮ್ಮ ಯೌವನದ ಶಕ್ತಿಗಳನ್ನೇ ಕುಂದಿಸಿಕೊಳ್ಳುತ್ತ ಯುವಜನಾಂಗ ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದೆ. ಇದರಿಂದ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಾದಕ ವ್ಯಸನಕ್ಕೆ ಇಂದಿನ ಯುವಪೀಳಿಗೆ ಬಲಿಯಾಗುತ್ತಿದೆ. ಇದರಿಂದ ಕ್ಯಾನ್ಸರ್, ಟಿ.ಬಿ., ಮತ್ತು ರಕ್ತಹೀನತೆಯಂತಹ ಹಲವಾರು ಕಾಯಿಲೆಗಳು ಬಾಧಿಸುತ್ತವೆ. ಅಂತಹ ಮಾದಕ ವ್ಯಸನಗಳಿಂದ ದೂರವಾಗಿ, ಆರೋಗ್ಯ ಕಾಪಾಡಿಕೊಂಡಾಗ ಬಲಿಷ್ಠ ಭಾರತ ದೇಶ ನಮ್ಮದಾಗುವುದು ಎಂದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾದಕ ದ್ರವ್ಯಗಳ ವಿರುದ್ಧ ಘೋಷಣೆ ಕೂಗುತ್ತಾ ಜಾಗೃತಿ ಜಾಥಾ ನಡೆಸಲಾಯಿತು. ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್, ಕನ್ನಡನಾಡು ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷ ಸರ್ದಾರ್, ಅಧ್ಯಕ್ಷ ಅಣ್ಣೋಜಿರಾವ್, ಕೆ.ಆರ್.ಗೋಪಿ, ರಾಮು, ಬುಳ್ಳಿ ನಾಗರಾಜ್, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಕಮಲಮ್ಮ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗಂಗಗೊಂಡನಹಳ್ಳಿ ಜಗದೀಶ್, ಮಾವಿನಹಳ್ಳಿ ಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು.
- - - -6ಕೆಸಿಎನ್ಜಿ2:ಚನ್ನಗಿರಿ ಪಟ್ಟಣದಲ್ಲಿ ವ್ಯಸನಮುಕ್ತ ಸಮಾಜಕ್ಕಾಗಿ ದುಶ್ಚಟಗಳಿಂದ ದೂರವಿರಿ ಘೋಷಣೆಯೊಂದಿಗೆ ಶುಕ್ರವಾರ ಜನಜಾಗೃತಿ ಜಾಥಾ ನಡೆಯಿತು.