ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕಿನ ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಣಬೆ ಬೇಸಾಯ, ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತುಮಕೂರು, ಹಾಸನ ಹಾಗೂ ಬೆಂಗಳೂರು ಜಿಲ್ಲೆಗಳ ೬೦ ರೈತರು, ರೈತ ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಗಾನವಿ ಬಿ, ಆರ್. ರವರು ಅಣಬೆ ಬೇಸಾಯದ ಮಹತ್ವ, ವಿವಿಧ ಆಣಬೆಗಳ ಪ್ರಭೇದಗಳು, ಅಣಬೆ ಬೀಜ ಉತ್ಪಾದನೆ, ಬೇಸಾಯ ತಂತ್ರಜ್ಞಾನ, ಕೊಯ್ಲು ನಂತರದ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಹಾಗೂ ಅದರಿಂದಾಗುವ ಆರ್ಥಿಕ ಲಾಭದ ಕುರಿತು ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಣಬೆ ಉತ್ಪಾದನೆಯ ಹಂತಗಳನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು. ಗುಬ್ಬಿ ತಾಲೂಕಿನ ಹಾಗಲವಾಡಿಯ ಗಂಗಾಲಕ್ಷ್ಮೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಣಬೆ ಬೇಸಾಯದ ತಮ್ಮ ಅನುಭವ, ಉದ್ಯಮದ ಅವಕಾಶಗಳು ಹಾಗೂ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗಗಳ ಕುರಿತು ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಡಾ. ಶಂಕರ ಎಂ.ಎಚ್. ಅಣಬೆ ಬೇಸಾಯವು ಕಡಿಮೆ ಬಂಡವಾಳದಲ್ಲಿ ಕೈಗೊಳ್ಳಬಹುದಾದ ಉದ್ಯಮವಾಗಿದ್ದು, ಭೂ ಹಿಡುವಳಿ ಇಲ್ಲದಿರುವವರು ಸಹ ಇದನ್ನು ಅಳವಡಿಸಿಕೊಳ್ಳಬಹುದಾಗಿದ್ದು, ಅಣಬೆ ಬೇಸಾಯದ ಮೂಲಕ ಅಧಿಕ ಆದಾಯ ಗಳಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ತಸ್ಮಿಯಾ ಕೌಸರ್, ಡಾ. ಕೀರ್ತಿಶಂಕರ್, ಡಾ. ದರ್ಶನ್ ಮತ್ತು ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.