ಕನ್ನಡಪ್ರಭ ವಾರ್ತೆ ಹಾಸನ

ನೀಟ್‌-ಯುಜಿ ಪ್ರಶ್ನೆ ಪರೀಕ್ಷೆಯಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.)ಯನ್ನು ರದ್ದುಗೊಳಿಸುವಂತೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಎಐಡಿಎಸ್‌ಒ ಹಾಸನ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬುಧವಾರ ನಗರದ ಹೇಮಾವತಿ ಪ್ರತಿಮೆ ಮುಂಭಾಗ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚೈತ್ರ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯದಿಂದ ದೇಶದಾದ್ಯಂತ ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿರುವ ಸುಮಾರು ೨೩ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು. ನೀಟ್ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದರೂ, ಎನ್‌ಟಿಎ ಪರೀಕ್ಷೆ ನಡೆಸಿರುವುದು ವಿದ್ಯಾರ್ಥಿಗಳ ನಂಬಿಕೆಗೆ ದ್ರೋಹವಾಗಿದೆ ಎಂದು ಟೀಕಿಸಿದರು. ೨೦೨೨ ಮತ್ತು ೨೦೨೪ರಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ೨೦೨೪ರಲ್ಲಿ ಬಿಹಾರದಲ್ಲಿ ಕೆಲವರ ಬಂಧನ ನಡೆದರೂ, ಸೋರಿಕೆಯ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ವಿಫಲರಾಗಿದ್ದರು. ಇದೇ ವೈಫಲ್ಯದಿಂದ ಈ ವರ್ಷವೂ ಹಗರಣ ಮರುಕಳಿಸಿದೆ ಎಂದು ಆರೋಪಿಸಿದರು. ಪ್ರತಿವರ್ಷ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದ್ದರೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಯುತ್ತಿದೆ. ಆದರೆ ಶಿಕ್ಷಣ ಸಚಿವರು ಹಾಗೂ ಎನ್‌ಟಿಎ ಅಧಿಕಾರಿಗಳು ಯಾರೂ ಜವಾಬ್ದಾರಿ ಹೊರುವ ಮನೋಭಾವ ತೋರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣವನ್ನು ದೊಡ್ಡ ಮಾರುಕಟ್ಟೆಯಾಗಿ ಪರಿವರ್ತಿಸಲು ಸಿಇಟಿ ಬಳಿಕ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು. ಇದರ ಪರಿಣಾಮವಾಗಿ ಕೋಚಿಂಗ್ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಲಕ್ಷಾಂತರ ರೂಪಾಯಿಗಳ ಶುಲ್ಕ ವಸೂಲಿ ಮಾಡುವ ಶಿಕ್ಷಣ ಉದ್ಯಮ ಬೆಳೆದಿದೆ ಎಂದು ಹೇಳಿದರು. ಕೋಟಾ ಸೇರಿದಂತೆ ವಿವಿಧ ನಗರಗಳಲ್ಲಿ ಕೋಚಿಂಗ್ ಒತ್ತಡದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿನ ನೀಟ್ ಪರೀಕ್ಷೆ ರದ್ದಾದ ಬಳಿಕವೂ ಆರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನೀಟ್ ಕೋಚಿಂಗ್ ಉದ್ಯಮದ ವಾರ್ಷಿಕ ವಹಿವಾಟು ಒಂದು ಲಕ್ಷ ಕೋಟಿ ರುಪಾಯಿಗೂ ಅಧಿಕವಾಗಿದ್ದು, ನೀತಿ ಆಯೋಗದ ವರದಿಯ ಪ್ರಕಾರ ಒಂದು ಕುಟುಂಬ ವರ್ಷಕ್ಕೆ ೮೦ ಸಾವಿರದಿಂದ ೩ ಲಕ್ಷದವರೆಗೆ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ಶಿಕ್ಷಣವು ಸಾರ್ವಜನಿಕ ಹಕ್ಕಾಗಿರಬೇಕಾದರೆ ಅದು ಇಂದು ವ್ಯಾಪಾರ ವಸ್ತುವಾಗಿ ಮಾರ್ಪಟ್ಟಿದೆ. ಬಂಡವಾಳ ಹೂಡಿ ಲಾಭಗಳಿಸುವ ಕ್ಷೇತ್ರವಾಗಿ ಶಿಕ್ಷಣವನ್ನು ರೂಪಿಸಲಾಗುತ್ತಿದ್ದು, ಇದರ ವಿರುದ್ಧ ವಿದ್ಯಾರ್ಥಿ ಸಮೂಹ ಜಾಗೃತವಾಗಬೇಕಿದೆ ಎಂದು ಅವರು ಕರೆ ನೀಡಿದರು. ಪ್ರತಿಭಟನಾಕಾರರು ಎನ್‌ಟಿಎಯನ್ನು ತಕ್ಷಣ ರದ್ದುಗೊಳಿಸಬೇಕು, ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಸೇರಿದಂತೆ ಶ್ರೇಷ್ಠ, ಶಿವು, ಪುರುಷೋತ್ತಮ್ ಹಾಗೂ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.