ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವವಿದ್ಯಾಲಯದ ಕಾಯ್ದೆಗೆ ವಿರುದ್ಧವಾಗಿ ಮಂಡ್ಯ ವಿವಿ ಪ್ರಭಾರ ಕುಲಪತಿಗಳಾಗಿ ಪ್ರೊ.ಶಿವಚಿತ್ತಪ್ಪ ಅವರ ನೇಮಕ ಮಾಡಿರುವುದು ದೃಢಪಟ್ಟಿದ್ದು ಕೂಡಲೇ ವಜಾ ಮಾಡಬೇಕು. ನೇಮಕಕ್ಕೆ ಕಾರಣರಾದ ನಿಕಟಪೂರ್ವ ಕುಲಪತಿ ಪುಟ್ಟರಾಜು ಅವರನ್ನೊಳಗೊಂಡಂತೆ ಈ ಬಗ್ಗೆ ತನಿಖೆ ಮಾಡಲು ರಾಜ್ಯಪಾಲರು ಆದೇಶ ನೀಡಬೇಕು ಎಂದು ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ವಿವಿ ಪ್ರಭಾರ ಕುಲಪತಿಗಳ ಕಾನೂನು ಬಾಹಿರ ನೇಮಕಾತಿ, ವಿವಿಯಲ್ಲಿನ ಅಕ್ರಮಗಳ ಆಡಳಿತಕ್ಕೆ ಸಂಬಂಧಿಸಿದಂತೆ ಲೋಕಭವನ ಹಾಗೂ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.
ಸರ್ಕಾರವು ಕಳೆದ ಮೇ 30 ರಂದು ತನಿಖೆಗೆ ಆದೇಶಿಸಿ 10 ದಿನಗೊಳಗಾಗಿ ವರದಿ ನೀಡುವಂತೆ 2ನೇ ಬಾರಿಗೆ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಿಗೆ ನಿರ್ದೇಶನ ನೀಡಿದೆ. ಸರ್ಕಾರದ ಬಳಿ ಎಲ್ಲ ಮಾಹಿತಿ ಲಭ್ಯವಿದ್ದು, ವಿವಿ ಕಾಯ್ದೆಗೆ ವಿರುದ್ಧವಾಗಿ ನೇಮಕಗೊಂಡಿದ್ದ ಪ್ರೊ. ಶಿವಚಿತ್ತಪ್ಪರನ್ನು ವಜಾ ಮಾಡಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಒತ್ತಾಯಿಸಿದರು.ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಪತ್ರ ಬರೆದು ಡೀನ್‌ಗಳ ಜೇಷ್ಠತಾ ಪಟ್ಟಿಯನ್ನು ಸಲ್ಲಿಸುವಂತೆ ಕಳೆದ ಮಾ.13ರಂದು ಕೋರಿದ್ದರಿಂದ ಮಂಡ್ಯ ವಿವಿಯ ಕುಲಸಚಿವ (ಆಡಳಿತ) ಅವರು ಡೀನ್‌ಗಳ ಜೇಷ್ಠತಾ ಪಟ್ಟಿಯನ್ನು ಲೋಕಭವನಕ್ಕೆ ಸಲ್ಲಿಸಿದ್ದಾರೆ. ನನ್ನ ದೂರಿನ ಪತ್ರದ ಆಧಾರದ ಮೇಲೆ ಪ್ರೊ.ಶಿವಚಿತ್ತಪ್ಪ ಅವರ ಪ್ರಭಾರ ಕುಲಪತಿಗಳ ನೇಮಕಾತಿ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರ ಕಚೇರಿಯಿಂದ ಲೋಕಭವನಕ್ಕೆ ಮಂಡ್ಯ ವಿವಿಯಲ್ಲಿ ಇರುವ ಕಾಯಂ ಪ್ರಾಧ್ಯಾಪಕರ ಜೇಷ್ಠತಾ ಪಟ್ಟಿಯನ್ನು ಕಳುಹಿಸಿ ಪ್ರೊ.ಶಿವಚಿತ್ತಪ್ಪರವರು ಜೇಷ್ಠತಾ ಪಟ್ಟಿಯಲ್ಲಿ 6ನೇಯವರಾಗಿರುವುದನ್ನು ಸೂಚಿರುತ್ತಾರೆ ಎಂದರು.
ನಿಕಟಪೂರ್ವ ಕುಲಪತಿ ಪ್ರೊ.ಪುಟ್ಟರಾಜು ಅವರು ಪ್ರೊ.ಶಿವಚಿತ್ತಪ್ಪರವರ ನೇಮಕಾತಿ ಪರವಾಗಿ ಸುಳ್ಳು ಮಾಹಿತಿಯನ್ನು ವಿವಿ ಕಾಯ್ದೆಯ ನಿಯಮಗಳಿಗೆ ನಿಯಮ ಬಾಹಿರವಾಗಿ ಲೋಕಭವನದ ವಿಶೇಷ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕಾನೂನು ಬಾಹಿರ ನೇಮಕಾತಿಗೆ ಕಾರಣರಾಗಿದ್ದಾರೆ ಎಂದು ದೂರಿದರು.
ರಾಜ್ಯಪಾಲರಿಗೆ ನಾನು ವೈಯಕ್ತಿಕವಾಗಿ 5 ಪತ್ರ ಹಾಗೂ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರಿಗೂ ಒಂದು ಪತ್ರ ಬರೆದು ಮಂಡ್ಯ ವಿವಿ ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪರ ಕಾನೂನುಬಾಹಿರ ನೇಮಕಾತಿ ಮತ್ತು ಅವರ ಆಡಳಿತ ಲೋಪದೋಷಗಳನ್ನು ತಿಳಿಸಿದರೂ ಸಹ ಇದುವರೆಗೂ ಯಾವುದೇ ಕ್ರಮಕೈಗೊಳ್ಳದೇ ಇರುವುದು ಲೋಕಭವನದ ಕೆಲವು ಅಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಶಾಮೀಲಾಗಿದ್ದಾರೆ ಎಂಬುದು ವಿವಿ ಪ್ರಾಧ್ಯಾಪಕರ ಹಾಗೂ ಜನಸಾಮಾನ್ಯರ ಮಾತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರಾಷ್ಟ್ರಪತಿಗೆ ದೂರು ಸಲ್ಲಿಸುವೆ:ರಾಜ್ಯಪಾಲರು ಮತ್ತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮವಹಿಸಿಲ್ಲ. ಮಾಹಿತಿ ನೀಡದೇ ಇದ್ದ ಪಕ್ಷದಲ್ಲಿ ತಮ್ಮ ರಾಜ್ಯಪಾಲರ ಕಚೇರಿಗೆ ನಾನು ಬರೆದಿರುವ 5 ಪತ್ರಗಳಲ್ಲಿನ ವಿವರಗಳನ್ನು ರಾಷ್ಟ್ರಪತಿಗಳ ಅವಗಾಹನೆಗೂ ತರಲಾಗುವುದು ಎಂದು ಮರಿತಿಬ್ಬೇಗೌಡರು ತಿಳಿಸಿದರು.
ಲೋಕಭವನದಲ್ಲಿ ಕೆಲ ಅಧಿಕಾರಿಗಳಿಂದ ತಮ್ಮ ಕಚೇರಿಯಲ್ಲೇ ಕಾನೂನುಬಾಹಿರ ಅಕ್ರಮಗಳು ನಡೆಯುತ್ತಿವೆ. ಈ ಅಧಿಕಾರಿಗಳೇ ಪ್ರೊ.ಪುಟ್ಟರಾಜು ಮತ್ತು ಪ್ರೊ.ಶಿವಚಿತ್ತಪ್ಪ ಅವರ ಜತೆ ಕೈಜೋಡಿಸಿರುವುದು ದೃಢಪಟ್ಟಿದೆ. ಇನ್ನಾದರೂ ರಾಜ್ಯಪಾಲರು ಪ್ರಭಾರ ಕುಲಪತಿಗಳನ್ನು ಕಾನೂನು ರೀತ್ಯಾ ವಜಾಗೊಳಿಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕೂಡಲೇ ನಿಯಮಾನುಸಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.ಮುಖ್ಯಮಂತ್ರಿಗೂ ಮನವಿ ಸಲ್ಲಿಕೆ:
ಮಂಡ್ಯ ವಿವಿಯಲ್ಲಿ ಇಷ್ಟೆಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿಯೇ ಇರುವುದರಿಂದ ಅವರನ್ನು ಭೇಟಿ ಮಾಡಿ ಕೂಲಂಕುಷವಾಗಿ ವಿಷಯ ತಿಳಿಸುತ್ತೇನೆ. ಲೋಕಭವನದ ಕೆಲ ಕೆಟ್ಟ ಅಧಿಕಾರಿಗಳಿಂದ ವಿಶ್ವವಿದ್ಯಾಲಯಗಳ ಹೆಸರು ಹಾಳಾಗುತ್ತಿದೆ ಎಂದು ದೂರಿದರು.