ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕಳೆದ 8-10 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಅಷ್ಟಾಗಿ ನಡೆಯದೇ ಇರುವುದರಿಂದ ಈಗ ನಡೆಯುತ್ತಿರುವ ಶಿಕ್ಷಕರ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ 5 ವರ್ಷ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದರೂ ಪ್ರಯೋಜನ ಆಗುತ್ತಿಲ್ಲ. ಏಕೆಂದರೆ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ನೀಡಿಲ್ಲ.
ನೇಮಕಾತಿ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಹಲವು ವರ್ಷಗಳಿಂದ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶವೇ ದೊರೆತಿಲ್ಲ. ಹೀಗಾಗಿ ಸರ್ಕಾರ ಇನ್ನು ಮುಂದೆ ಮಾಡಿಕೊಳ್ಳುವ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡುವಂತೆ ಆಗ್ರಹಿಸಿ ಧಾರವಾಡ, ವಿಜಯಪುರ, ಬೆಂಗಳೂರು ಸೇರಿದಂತೆ ಹಲವೆಡೆ ಹೋರಾಟ ಮಾಡಿದ ಪರಿಣಾಮ ರಾಜ್ಯ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಿ 2026 ಜ.29 ರಂದು ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಮೊರಾರ್ಜಿ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗ ಸೇರಿದಂತೆ ಎಸ್ಸಿ, ಎಸ್ಟಿ, ಒಬಿಸಿ ಒಳಗೊಂಡು ಎಲ್ಲರಿಗೂ 5 ವರ್ಷಗಳ ವಿನಾಯಿತಿ ಅಡಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.ಆದರೆ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಯೋಮಿತಿ ಸಡಿಲಿಕೆ ಮಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವಯೋಮಿತಿ ಸಡಿಲಿಕೆಯ ಆದೇಶದ ಅನುಸಾರ ವಯೋಮಿತಿ ಸಡಿಲಿಕೆ ನೀಡಿದರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೂ ಅವಕಾಶ ದೊರೆಯಲಿದೆ. ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಸಾಮಾನ್ಯ ವರ್ಗಕ್ಕೆ 40 ವರ್ಷ, ಪ್ರವರ್ಗ 2ಎ 2ಬಿ 3ಎ ಮತ್ತು 3ಬಿ 43 ವರ್ಷ ಹಾಗೂ ಎಸ್ಸಿ, ಎಸ್ಟಿ ಪ್ರವರ್ಗ ಅಭ್ಯರ್ಥಿಗಳಿಗೆ 45 ಎಂದು ನಿಗದಿ ಮಾಡಿ ಅರ್ಜಿ ಆಹ್ವಾನಿಸಿದೆ. ಆದರೆ ಸರ್ಕಾರ ಹೊರಡಿಸಿರುವ ವಯೋಮಿತಿ ಸಡಿಲಿಕೆಯ ಆದೇಶ ಪರಿಗಣಿಸಿದರೆ ಇನ್ನು 5 ವರ್ಷಗಳ ವಿನಾಯಿತಿಯಿಂದ ಅರ್ಜಿ ಸಲ್ಲಿಸುವ ಅವಕಾಶ ಮತ್ತಷ್ಟು ಅಭ್ಯರ್ಥಿಗಳಿಗೆ ದೊರೆಯುತ್ತದೆ.
ಕೋರ್ಟ್ ಮೊರೆ:
ಸರ್ಕಾರದ ಆದೇಶ ಕಡೆಗಣಿಸಿ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡದೇ ಇರುವುದನ್ನು ಪ್ರಶ್ನಿಸಿ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ. ಸರ್ಕಾರ ಮಧ್ಯಪ್ರವೇಶ ಮಾಡಿ ಕೂಡಲೇ ಈ ಆದೇಶ ಅನುಸಾರ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಹೋರಾಟಗಳು ವಿಫಲ:ನೇಮಕಾತಿ ಮತ್ತು ವಯೋಮಿತಿ ಸಡಿಲಿಕೆ ಮಾಡುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸರ್ಕಾರವೇ ಮಾನ್ಯತೆ ನೀಡಿ ವಯೋಮಿತಿ ಸಡಿಲಿಕೆ ಮಾಡುವಂತೆ ಆದೇಶ ಹೊರಡಿಸಿದ್ದರೂ, ಶಿಕ್ಷಣ ಇಲಾಖೆ ಹೋರಾಟಕ್ಕೆ ಬೆಲೆ ಕೊಡದೆ ಮತ್ತು ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ ವಯೋಮಿತಿ ಸಡಿಲಿಕೆ ನೀಡದೇ ಇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.----
ಉಗ್ರ ಹೋರಾಟಸರ್ಕಾರದ ಆದೇಶ ಇದ್ದಾಗ ಕೂಡ ನಿರ್ಲಕ್ಷ್ಯಮಾಡಿ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿ ವಯೋಮಿತಿ ಸಡಿಲಿಕೆ ಮಾಡದೇ ಇರುವುದನ್ನು ಸಹಿಸುವುದಿಲ್ಲ. ಈ ಕುರಿತು ಸರ್ಕಾರ ಕೂಡಲೇ ಮುತುವರ್ಜಿ ವಹಿಸಿ ಅಧಿಸೂಚನೆ ತಿದ್ದುಪಡಿ ಮಾಡಿ ವಯೋಮಿತಿ ಸಡಿಲಿಕೆ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ.
-ಅಮರೇಶ ಕಡಗದ, ಮಾಜಿ ರಾಜ್ಯಾಧ್ಯಕ್ಷ, ಎಸ್ಎಫ್ಐ.