ಸಾರಾಂಶ
ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಹಿಂತಿರುಗಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಎಸ್. ಸುಜಾತ ಭಟ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಸನಗರ
ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ಹಿಂತಿರುಗಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಎಸ್. ಸುಜಾತ ಭಟ್ ತಿಳಿಸಿದರು.ಇಲ್ಲಿನ ಸಿಡಿಪಿಒ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಂಬತ್ತು ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಅವರು ಕೊಡುಗೆಯಾಗಿ ನೀಡಿದ ಊಟದ ತಟ್ಟೆ ಇರಿಸುವ ಸ್ಟೀಲ್ ಸ್ಟ್ಯಾಂಡ್ ವಿತರಿಸಿ ಮಾತನಾಡಿದರು.
ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸ ಮಾಡಿಸುವುದು ಮಾತ್ರವೇ ಅಲ್ಲ. ನಮ್ಮ ಪೂರ್ವಜರು ಬಿಟ್ಟು ಹೋದ ಆಚರಣೆ, ಸಂಸ್ಕೃತಿಯ ಜೊತೆಗೆ ಪ್ರಕೃತಿ, ಪರಿಸರ ಮಾತ್ರವಲ್ಲ, ನೈತಿಕ, ಮಾನವೀಯ ಮೌಲ್ಯಗಳ ಕಲಿಕೆ ಕೂಡ ಮಹತ್ವದ್ದು. ಇವುಗಳ ಕಲಿಕೆಯಿಂದ ಮಕ್ಕಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.ಈ ಹಿನ್ನೆಲೆಯಲ್ಲಿ ದೇಶದ ಪ್ರಗತಿಯಲ್ಲಿ ಅಂಗನವಾಡಿ ಕೇಂದ್ರದ ಸಿಬ್ಬಂದಿಗಳ ಪಾತ್ರ, ಕಾರ್ಯವೈಖರಿ ಮಹತ್ತರವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ದಿವ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಸುಜಾತ ಭಟ್ ಅವರು, ತಾವು ಕಾರ್ಯ ನಿರ್ವಹಿಸಿದ ಎಲ್ಲಾ ಸ್ಥಳಗಳಲ್ಲಿ ಮಕ್ಕಳಿಗೆ ಮಾತೃ ಮಮತೆ ತೋರಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಹಸನಾಗಿಸಲು ಶಕ್ತಿ ಮೀರಿ ಶ್ರಮಿಸಿರುವುದು ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ಎಂದರು.ಪ್ರಥಮ ದರ್ಜೆ ಸಹಾಯಕ ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಾದ ದಿವ್ಯ, ಸುಗಂಧ, ಸುಜಾತ, ಲಕ್ಷ್ಮೀ, ಲತಾ, ವೀಣಾ, ಶಾರದ, ಸುಜಾವತಿ, ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಹಿಂದೆಯೂ ಸುಜಾತ ಭಟ್ ತಾಲೂಕಿನ ಸುಮಾರು 10 ಅಂಗನವಾಡಿ ಕೇಂದ್ರಗಳಿಗೆ ಉಚಿತ ಪಾತ್ರೆ ಸ್ಟ್ಯಾಂಡ್ ಕೊಡುಗೆಯಾಗಿ ನೀಡಿದ್ದರು.