ಸಾರಾಂಶ
ಚಿಕ್ಕಮಗಳೂರು: ರಾಜ್ಯದಲ್ಲಿ ಈ ಒಂದೇ ವರ್ಷದಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಕೆಪೆಕ್ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ (ಪಿಎಂಎಫ್‌ಎಂಇ) ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ 6 ಸಾವಿರ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಈ ಬಾರಿ ಒಂದೇ ವರ್ಷದಲ್ಲಿ 5 ಸಾವಿರ ಘಟಕಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯೋಜನೆಯ ಅರಿವು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಪಿಎಂಎಫ್‌ಎಂಇ ಯೋಜನೆಯಡಿ ಉದ್ದಿಮೆ ಸ್ಥಾಪಿಸುವವರಿಗೆ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಸಬ್ಸಿಡಿ ನೀಡುತ್ತಿತ್ತು. ಆದರೆ, ಈ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಶೇ.60 ರಷ್ಟು ಕಬ್ಸಿಡಿ ನೀಡುತ್ತಿದೆ. ಇನ್ನುಳಿಕೆ ಶೇ.40 ರಷ್ಟು ಸಬ್ಸಿಡಿ ಕೇಂದ್ರ ಸರ್ಕಾರ ನೀಡಲಿದೆ ಎಂದರು.ಯುವಕರು ಕೆಲಸಕ್ಕಾಗಿ ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಮಾತ್ರವಲ್ಲ, ದೇಶದ ಹಲವು ರಾಜ್ಯ, ವಿದೇಶಗಳಿಗೂ ತೆರಳುತ್ತಿದ್ದಾರೆ. ಹಲವು ಮಂದಿ ಮುಂದಿನ ಬದುಕಿಗಾಗಿ ಶಿಕ್ಷಣ ಪಡೆಯಬೇಕೆಂದು ಭಾವಿಸಿದ್ದಾರೆ. ಶಿಕ್ಷಣ ಜ್ಞಾನಗೋಸ್ಕರ, ಬದುಕಿಗಾಗಿ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಆಗು ಹೋಗುವ ಪ್ರಚಲಿತ ವಿಷಯವನ್ನು ತಿಳಿದುಕೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು ಬೇಕು. ಕೆಲಸಕ್ಕಾಗಿ ಮಂತ್ರಿಗಳ ಮುಂದೆ, ಸಚಿವರ ಮನೆಯ ಮುಂದೆ ನಿಲ್ಲುವುದು ಸೂಕ್ತವಲ್ಲ. ನೀವೇ ಸ್ವಯಂ ಉದ್ಯೋಗ ಮಾಡಿ ಇತರರಿಗೂ ಉದ್ಯೋಗ ನೀಡುವ ದೃಢ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಯುವ ಸಮೂಹ ಸ್ವಯಂ ಉದ್ಯೋಗ ಕಂಡುಕೊಂಡರೆ ಆರ್ಥಿಕವಾಗಿ ಸುಧಾರಣೆ ಆಗಲಿದೆ. ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ತಲಾ ಆದಾಯದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರುಪಾಯಿ ಕೊಟ್ಟರೂ ಕೂಡ ಸಣ್ಣ ಉದ್ದಿಮೆ ಸ್ಥಾಪಿಸುವವರಿಗೆ ಸಬ್ಸಿಡಿ ಹೆಚ್ಚಳ ಮಾಡಿದ್ದೇವೆ. ಅದೇ ರೀತಿ ಸಹಕಾರ ಸಂಘಗಳಲ್ಲಿ ಬಡ್ಡಿ ರಹಿತ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿದ್ದೇವೆ. ಯಾವ ಯೋಜನೆಯೂ ನಿಂತಿಲ್ಲ ಎಂದ ಅವರು, ಈ ಎಲ್ಲಾ ಬೆಳವಣಿಗೆಯನ್ನು ಪ್ರತಿಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.ಕಬ್ಬು ಬೆಳೆಯುವ ಜಿಲ್ಲೆಗಳ ರೈತರು ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದರು. ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮುಖ್ಯಮಂತ್ರಿಯವರು ಕಬ್ಬು ಕಟಾವಿನ 244 ಯಂತ್ರಗಳ ಖರೀದಿಗೆ ಸಬ್ಸಿಡಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಸಮಸ್ಯೆ ಕಡಿಮೆಯಾಗಲಿದೆ. ಹೀಗೆ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಆರ್ಥಿಕವಾಗಿ ಸದೃಢರಾಗಬೇಕಾದರೆ ಕೃಷಿಯ ಜತೆಗೆ ಕೃಷಿಯೇತರ ಚಟುವಟಿಕೆಯಲ್ಲೂ ರೈತರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಾಲ ಬದಲಾಗುತ್ತಿದ್ದಂತೆ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂರಕ್ಷಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಖಾಡಾ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಿರು ಉದ್ದಿಮೆ ಸ್ಥಾಪನೆ ಮಾಡಲು ರಾಜ್ಯದಲ್ಲಿ ಈವರೆಗೆ 3200 ಅರ್ಜಿಗಳು ಬಂದಿವೆ. ಈ ಘಟಕಗಳು ಸ್ಥಾಪನೆ ಮಾಡಲು ಬ್ಯಾಂಕ್‌ಗಳ ಸಿಬಿಲ್ ಸ್ಕೋರ್ ಅನ್ವಯ ಆಗುವುದಿಲ್ಲ. ಜಾಗದ ಭೂ ಪರಿವರ್ತನೆ ಅವಶ್ಯಕತೆ ಇಲ್ಲ. ಯಾವುದೇ ಗ್ಯಾರಂಟಿ ಕೊಡಬೇಕಾಗಿಲ್ಲ, ಈ ವಿಷಯವನ್ನು ಜಿಲ್ಲಾಧಿಕಾರಿಗಳು ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಬೇಕು.- ಎನ್. ಚಲುವರಾಯಸ್ವಾಮಿ, ರಾಜ್ಯ ಕೃಷಿ ಸಚಿವಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ರೈತರು ಬೆಳೆ ಬೆಳೆಯುವ ಜತೆಗೆ ಮಾರುಕಟ್ಟೆಯೂ ಅತಿ ಮುಖ್ಯ. ನಮ್ಮದೇ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಪದಾರ್ಥಗಳನ್ನು ಬಿಡುಬೇಕು. ಆ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಆಗ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ.- ಟಿ.ಡಿ. ರಾಜೇಗೌಡ, ಶಾಸಕ, ಶೃಂಗೇರಿ ಕ್ಷೇತ್ರ
ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿಯಬಾರದು. ಕೃಷಿ ಲಾಭದಾಯಕ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಕೃಷಿಯಲ್ಲೇ ಉದ್ಯೋಗ ಕಂಡುಕೊಳ್ಳಬೇಕು. ನಮ್ಮ ಹಿರಿಯರಲ್ಲಿ ಅಕ್ಷರ ಜ್ಞಾನ ಇಲ್ಲದಿದ್ದರೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಿ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದರು. ಆದರೆ, ಈಗ ಸ್ವಾಸ್ಥ್ಯ ಸಮಾಜ ಉಳಿದುಕೊಂಡಿಲ್ಲ, ನಾವುಗಳು ದೇಶ ಮತ್ತು ನಾಡನ್ನು ಉಳಿಸಬೇಕು. ಸ್ವಾವಲಂಬಿ ಬದುಕು ನಡೆಸಬೇಕು. ಬೇರೆಯವರಿಗೂ ಉದ್ಯೋಗ ನೀಡಬೇಕು.- ಎಸ್.ಎಲ್. ಭೋಜೇಗೌಡ, ವಿಧಾನ ಪರಿಷತ್ ಸದಸ್ಯ