ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಡೀ ದೇಶದಲ್ಲೇ ತಲಾದಾಯದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆಯೆಂದು ಕೇಂದ್ರ ಸರ್ಕಾರ ಹೇಳಿದ್ದು, ಜನರ ಆದಾಯ ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ತಲಾದಾಯ ಹೆಚ್ಚಳಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ನಮ್ಮ ಗ್ಯಾರಂಟಿ ಯೋಜನೆಗಳೇ ಕಾರಣವಾಗಿರುವುದು ಸ್ಪಷ್ಟ ಎಂದರು.
ಜನರ ಆದಾಯ ಹೆಚ್ಚಾಗಲು ನಮ್ಮ ಗ್ಯಾರಂಟಿ ಯೋಜನೆಗಳು ಕಾರಣವೆಂಬುದನ್ನು ತಿಳಿಸುವ ಕಾರ್ಯ ಆಗಬೇಕು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳು ಫಲಾನುಭವಿಗಳಿಗೆ ತಲುಪುತ್ತಿದ್ದರೂ ಅವುಗಳ ಪ್ರಚಾರದಲ್ಲಿ, ಜನರಿಗೆ ನಮ್ಮ ಸರ್ಕಾರದ ಕೊಡುಗೆಗಳನ್ನು ತಿಳಿಸುವ ವಿಚಾರದಲ್ಲಿ ಹಿಂದೆ ಬಿದ್ದಿದ್ದೇವೆ. ನಮ್ಮ ಸರ್ಕಾರದ ಯೋಜನೆಗಳು, ಸೌಲಭ್ಯಗಳು ಜನರಿಗೆ ತಲುಪುತ್ತಿದ್ದು, ಅವುಗಳ ಬಗ್ಗೆ ಪ್ರಚಾರದ ಕಡೆಗೂ ನಾವು ಗಮನಹರಿಸಬೇಕಾಗಿದೆ ಎಂದರು.ವಿಪಕ್ಷಗಳು ಶೇ.5ರಷ್ಟು ಮಾತ್ರ ಕೆಲಸ ಮಾಡಿ, ಶೇ.95ರಷ್ಟು ಪ್ರಚಾರ ಪಡೆಯುತ್ತವೆ. ಕಾಂಗ್ರೆಸ್ ಶೇ.95ರಷ್ಟು ಕೆಲಸ ಮಾಡಿದರೂ ಶೇ.5ರಷ್ಟು ಮಾತ್ರ ಪ್ರಚಾರ ಪಡೆಯುತ್ತಿದೆ. ಹಾಗಾಗಿ ಚುನಾವಣೆ ವೇಳೆ ಮಾತ್ರ ಪ್ರಚಾರ ಸಮಿತಿ ಕಾರ್ಯ ನಿರ್ವಹಿಸದೇ, ವರ್ಷದ ಎಲ್ಲಾ ದಿನವೂ ಕೆಲಸ ಮಾಡಲಿ. ಗೃಹಲಕ್ಷ್ಮಿಯಡಿಮಹಿಳೆಯರಿಗೆ ನೀಡುವ ಹಣದಿಂದ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಕೇವಲ ರಸ್ತೆ, ಕಟ್ಟಡ ನಿರ್ಮಾಣ ಮಾತ್ರ ಅಭಿವೃದ್ಧಿಯಲ್ಲ, ಜನರಿಗೆ ಆರ್ಥಿಕ ಶಕ್ತಿ ತುಂಬುವುದೂ ಅಭಿವೃದ್ಧಿಯೆಂಬುದನ್ನು ಪ್ರತಿ ಮತದಾರರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಸಮಿತಿಯಿಂದ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮ ಮಟ್ಟದಿಂದಲೇ ಪ್ರತಿಯೊಬ್ಬರೂ ಪ್ರಚುರಪಡಿಸುವ ಕೆಲಸ ಮಾಡಲಾಗುವುದು. ಅಲ್ಲದೇ ಪಕ್ಷವನ್ನು ಸಿದ್ಧಾಂತದೊಂದಿಗೆ ಕಟ್ಟಲಾಗುವುದು. ರಾಜ್ಯ ಸರ್ಕಾರ 4.09 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 1 ಲಕ್ಷ ಕೋಟಿ ರು.ಗಳನ್ನು ಜನರ ಖಾತೆಗೆ ಹಾಕುತ್ತಿದೆ. 58 ಸಾವಿರ ಕೋಟಿ ಗ್ಯಾರಂಟಿ. 118 ಸಾವಿರ ಕೋಟಿ ರು.ಗಳಲ್ಲಿ ಉಚಿತ ವಿದ್ಯುತ್ ನೀಡುತ್ತಿದೆ. ಇದರಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ. ಸರ್ಕಾರಿ ನೌಕರರ 7 ನೇ ವೇತನಕ್ಕೆ 23 ಸಾವಿರ ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ರಾಜ್ಯ ಪ್ರಚಾರ ಸಮಿತಿ ಸಂಯೋಜಕ ಸುಧೀರ್, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಎಸ್ಸಿ ಘಟಕದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ವಡ್ನಾಳ್ ಜಗದೀಶ್, ನಂಜಾನಾಯ್ಕ, ಡಾ.ಸಂತೋಷಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ, ನಂದಿಗಾವಿ ಶ್ರೀನಿವಾಸ, ಎಸ್.ಮಲ್ಲಿಕಾರ್ಜುನ, ದಾಕ್ಷಾಯಣಮ್ಮ, ಸರ್ವಮಂಗಳ ಇತರರು ಇದ್ದರು.