ಸಾರಾಂಶ
-ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 137 ನೇ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಸಾತ್ವಿಕತೆ ತುಂಬುವ ಕೆಲಸ ಮಾಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಕಲ್ಕಟ್ಟೆ ನಾಗರಾಜರಾವ್ ಸಲಹೆ ನೀಡಿದರು.ಗುರುವಾರ ಸಹರಾ ಕನ್ವಂಷನ್ ಹಾಲ್ ನಲ್ಲಿ ಶಿಕ್ಷಣ ಇಲಾಖೆ, ತಾ.ಪ್ರಾಥಮಿಕ ಶಾ.ಶಿ.ಸಂಘ, ಪ್ರೌಢ ಶಾಲಾ ಶಿ.ಸಂಘ, ಪಟ್ಟಣ ಪಂಚಾಯಿತಿ, ತಾ.ಪಂಚಾಯ್ತಿ ಸಹಯೋಗದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 137 ನೇ ಜನ್ಮ ದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಶಿಕ್ಷಕರಿಗೆ ಅಧಿಕಾರ ಸಿಕ್ಕರೆ ಎಲ್ಲಾ ಪ್ರಜೆಯನ್ನು ಒಳ್ಳೆಯ ವರನ್ನಾಗಿ ಮಾಡುತ್ತಾರೆ. ಇದರಿಂದ ದೇಶದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ದೇಶದಲ್ಲಿ ಶ್ರೀಮಂತರು, ಹಣ ಇದ್ದವರು ಶಿಕ್ಷಕ ವೃತ್ತಿಗೆ ಬರುತ್ತಿಲ್ಲ ಎಂಬುದು ವಿಷಾದದ ಸಂಗತಿ. ಶಿಕ್ಷಕರು ಸಂವೇದನಶೀಲತೆಯಿಂದ ಅವಲೋಕನ ಮಾಡಿಕೊಳ್ಳಬೇಕು. ಶಿಕ್ಷಣ ಎಂದರೆ ಒಂದು ಸಾಧನ. ಮನುಷ್ಯತ್ವ, ಮಾನವೀಯತೆ ಕಲಿಸುವುದು ಸಹ ಶಿಕ್ಷಣ. ವಿದ್ಯಾರ್ಥಿಗಳಿಗೆ ಜೀವನ ಏಂದರೆ ಏನು ? ಎಂಬುದನ್ನು ಸಹ ಕಲಿಸಬೇಕು, ಶಿಕ್ಷಕ,ಶಿಕ್ಷಕಿಯರು ನೈತಿಕ ಪ್ರಜ್ಞೆ ಬೆಳೆಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ,.ಅಂಶುಮಂತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ. ರಾಧಾಕೃಷ್ಣನ್ ಕರ್ನಾಟಕದಲ್ಲಿ ಶಿಕ್ಷಣ ಪಡೆದಿದ್ದರು ಎಂಬುದು ನಮಗೆ ಹೆಮ್ಮೆ.ಅವರ ಆದರ್ಶ ಇಂದಿನ ಪೀಳಿಗೆಯವರು ಅನುಸರಿಸಬೇಕು. ಶಿಕ್ಷಕ ವೃತ್ತಿ ಪವಿತ್ರ ಎಂದ ಅವರು, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಗ್ರಾಮೀಣ ಭಾಗದ ಶಿಕ್ಷಕರ ಸಮಸ್ಯೆ ಗಮನಿಸಿದೆ. ಈ ಬಾರಿ ಎನ್.ಆರ್.ಪುರ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಇದಕ್ಕೆ ತಾಲೂಕಿನ ಶಿಕ್ಷಕರೇ ಕಾರಣರಾಗಿದ್ದಾರೆ. ಶಿಕ್ಷಕರ ಹಲವು ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಈಗಾಗಲೇ ಶಿಕ್ಷಕ ದಿನಾಚರಣೆ ಅಂಗವಾಗಿ ಬಾಳೆಹೊನ್ನೂರು ಜೇಸಿ ಸಂಸ್ಥೆ ಸಹಕಾರದಿಂದ ಕ್ರೀಡಾ ಕೂಟ ನಡೆಸಲಾಗಿದೆ. ಸರ್ಕಾರ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೂ ಬಹುತೇಕ ಮೂಲಭೂತ ಸೌಕರ್ಯ ಕಲ್ಪಿಸಿದೆ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದೇವೆ. ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ 93.06 ರಷ್ಟು ಫಲಿತಾಂಶ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ 12 ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ತಾಲೂಕಿನ ಪ್ರಾಥಮಿಕ ಶಾಲಾ ವಿಭಾಗದ ಬಾಳೆಹೊನ್ನೂರಿನ ಆರ್.ಪಿ.ಮಠದ ಜಯಕುಮಾರ್, ನ.ರಾ.ಪುರ ಕೆಪಿಎಸ್ ನ ಶಿಕ್ಷಕಿ ಗಂಗಮ್ಮ, ಮುತ್ತಿನಕೊಪ್ಪ ಸರ್ಕಾರಿ ಶಾಲೆ ಶಿಕ್ಷಕಿ ಸರ್ವದ, ಹಂತುವಾನಿ ಶಾಲೆ ಕೆ.ಎಸ್.ಭಾಗ್ಯ, ಪ್ರೌಢ ಶಾಲಾ ವಿಭಾಗದಲ್ಲಿ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್ ಜೈನ್, ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಎಸ್.ರಮೇಶ್, ಬಾಳೆಹೊನ್ನೂರು ಸರ್ಕಾರಿ ಪ್ರೌಢ ಶಾಲೆ ಆಸ್ಪಾ ಅಖ್ತರ್ ಅವರಿಗೆ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಭೆ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು ವಹಿಸಿದ್ದರು. ಅತಿಥಿಗಳಾಗಿ ಪಪಂ ಸದಸ್ಯೆ ಜುಬೇದ, ತಹಸೀಲ್ದಾರ್ ತನುಜ, ತಾ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ತಾ.ಪಂಚಾಯಿತಿ ಇ.ಒ.ನವೀನ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಬಿಸಿಯೂಟ ಯೋಜನೆ ಬಿ.ಎನ್.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಗೇರ್ ಬೈಲು ನಟರಾಜ, ಕೆ.ಎಂ.ಸುಂದರೇಶ್, ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್,ನಂಜುಂಡಪ್ಪ, ಅಶೋಕ್,ಮನೀಶ್, ಕೋಟ್ರೇಶಪ್ಪ, ರಾಘವೇಂದ್ರ,ಶ್ರೀಕಾಂತ್, ಕಟ್ಟೇಗೌಡ ಮತ್ತಿತರರು ಇದ್ದರು.ಗಾನ ಕೋಗಿಲೆ ತಂಡದವರು ನಾಡಗೀತೆ, ರೈತಗೀತೆ ಹಾಡಿದರು. ಬೋಗೇಶಪ್ಪ ಸ್ವಾಗತಿಸಿದರು.ಸವೀನ ಹಾಗೂ ವಾಗ್ದೇವಿ ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮೊದಲು ಬಿ.ಇ.ಒ ಕಚೇರಿಯಿಂದ ಶಿಕ್ಷಕರು ಮೆರವಣಿಗೆ ನಡೆಸಿದರು.