ಚಾರಿತ್ರ್ಯವಿಲ್ಲದ ಶಿಕ್ಷಣ ಕೇಡಿಗೆ ದಾರಿ: ಪ್ರೊ.ಪದ್ಮನಾಭ

| Published : Aug 12 2024, 01:03 AM IST

ಸಾರಾಂಶ

ಯುವಕರು ಮೌಲ್ಯಗಳತ್ತ ಸಾಗಬೇಕು ಅವರು ಪಡೆದ ಶಿಕ್ಷಣ ಅವರ ಬದುಕಿಗೆ ದಾರಿ ತೋರಬೇಕು, ಆತ್ಮ ಸಾಕ್ಷಿಗೆ ವಿರುದ್ಧವಾದ ಸಂತೋಷ ಎಂದೂ ಬಯಸಬೇಡಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಾರಿತ್ರ್ಯವಿಲ್ಲದ ಶಿಕ್ಷಣ ಕೇಡಿಗೆ ದಾರಿಯಾಗುತ್ತದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಜೆ.ಎಲ್ ಪದ್ಮನಾಭ ಹೇಳಿದರು.

ಅವರು ಭಾನುವಾರ ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಕುವೆಂಪು ವಿವಿ, ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ಜನತೆ ಕುರಿತು ಉಪನ್ಯಾಸ ನೀಡಿ, ಕ್ರೌರ್ಯವೇ ವಿಂಜೃಬಿಸುತ್ತಿರುವ ಈ ಹೊತ್ತಿನಲ್ಲಿ ಹಿಂಸೆ ಎಲ್ಲೆಡೆ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರು ಪ್ರಸ್ತುತರಾಗುತ್ತಾರೆ, ನಾವು ಸಾಧ್ಯವಾದಷ್ಟು ಮನುಷ್ಯರಾಗಬೇಕು ಗಾಂಧೀಜಿಯವರ ತತ್ವವೂ ಇದೆ, ರಾಷ್ಟ್ರೀಯ ಸೇವಾ ಯೋಜನೆ ಉದ್ದೇಶವು ಇದೆ ಎಂದರು .

ವಿದ್ಯಾವಂತರನ್ನು ನಂಬುವುದೇ ಇಂದು ಕಷ್ಟವಾಗಿದೆ. ಅದರಲ್ಲೂ ನಾವೇ ಆರಿಸಿದ ರಾಜಕಾರಣಿಗಳ ನೋಡಿದರೆ ಅವರಿಂದ ನಮ್ಮ ಯುವಕರು ಏನನ್ನು ಕಲಿಯುತ್ತಾರೆ ಎಂಬ ಭೀತಿ ಎದುರಾಗುತ್ತದೆ. ಯುವಕರು ಮೌಲ್ಯಗಳತ್ತ ಸಾಗಬೇಕು ಅವರು ಪಡೆದ ಶಿಕ್ಷಣ ಅವರ ಬದುಕಿಗೆ ದಾರಿ ತೋರಬೇಕು, ಆತ್ಮ ಸಾಕ್ಷಿಗೆ ವಿರುದ್ಧವಾದ ಸಂತೋಷ ಎಂದೂ ಬಯಸಬೇಡಿ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಅದು ಮೌಲ್ಯದ ಬದುಕು ರೂಪಿಸುವಂತದ್ದು. ಇಂದು ಉಸಿರು ಕಟ್ಟುವ ವಾತಾವರಣವಿದೆ. ಗಾಂಧೀಜಿ ತತ್ವಗಳು ಯುವಕರನ್ನು ಸರಿದಾರಿಯತ್ತ ತೆಗೆದು ಕೊಂಡು ಹೋಗುತ್ತವೆ, ಆದರೆ ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಮಮತ ಪಿ.ಆರ್, ಸಹಾದ್ರಿ ವಾಣಿಜ್ಯ ಕಾಲೇಜಿನ ಸಹಪ್ರಾಧ್ಯಪಕ ಡಾ.ಗಿರಿಧರ್, ಶಿಬಿರದ ಸಂಚಾಲಕ ಪ್ರೊಫೆಸರ್ ಕೆಎಂ ನಾಗರಾಜ್, ಕುವೆಂಪು ವಿವಿ ಎನ್‌ಎಸ್ಎಸ್ ಸಂಯೋಜಕಿ ಶುಭಮರವಂತೆ, ಶಿಬಿರದ ಅಧಿಕಾರಿ ಡಾ.ಪ್ರಶಾಂತ್ ಎ.ಜಿ ಮುಂತಾದವರಿದ್ದರು.