ಸಮಾಜ ಕಟ್ಟುವ ಕಾರ್ಯದಲ್ಲಿ ಪತ್ರಿಕೆಗಳ ಪಾತ್ರ ಅನನ್ಯ: ಡಾ. ವಿಎಸ್‌ವಿ ಪ್ರಸಾದ್

| Published : Aug 12 2024, 01:03 AM IST

ಸಮಾಜ ಕಟ್ಟುವ ಕಾರ್ಯದಲ್ಲಿ ಪತ್ರಿಕೆಗಳ ಪಾತ್ರ ಅನನ್ಯ: ಡಾ. ವಿಎಸ್‌ವಿ ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಕಟ್ಟುವ ಕಾರ್ಯದಲ್ಲಿ ಪತ್ರಿಕೆಗಳ ಕೊಡುಗೆ ಅನನ್ಯವಾಗಿದೆ ಎಂದು ಎಂದು ಸ್ವರ್ಣ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ. ವಿಎಸ್‌ವಿ ಪ್ರಸಾದ್ ಹೇಳಿದರು .

ಕಲಘಟಗಿ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಹಾಗೂ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಧ್ಯಮಗಳು ನಿರಂತರವಾಗಿ ಮಾಡುತ್ತ ಬಂದಿವೆ ಎಂದು ಸ್ವರ್ಣ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ. ವಿಎಸ್‌ವಿ ಪ್ರಸಾದ್ ಹೇಳಿದರು .

ಪಟ್ಟಣದ ಗುಡ್ ನ್ಯೂಸ್ ಮಹಾವಿದ್ಯಾಲಯದಲ್ಲಿ ಶನಿವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಮಾಜ ಕಟ್ಟುವ ಕಾರ್ಯದಲ್ಲಿ ಪತ್ರಿಕೆಗಳ ಕೊಡುಗೆ ಅನನ್ಯವಾಗಿದೆ. ಪತ್ರಕರ್ತರು ಸುದ್ದಿ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿ ಕೆಲಸದಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ತುಂಬಾ ಹೆಚ್ಚಾಗಿದೆ. ನೈಜ ವರದಿ ಮಾತ್ರ ದಿನ ಪತ್ರಿಕೆಗಳಿಂದ ಸಿಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರಕಾರವನ್ನು ಬೀಳಿಸುವ ಮತ್ತು ಸರ್ಕಾರ ರಚಿಸುವಂತೆ ಮಾಡುವ ಶಕ್ತಿ ಪತ್ರಕರ್ತರಲ್ಲಿದೆ ಎಂದರು.

ಬೆಳಗ್ಗೆ ಪತ್ರಿಕೆ ಓದಿದ ನಂತರ ನಮ್ಮ ದೈನಂದಿನ ಕಾರ್ಯ ಪ್ರಾರಂಭವಾಗುತ್ತವೆ. ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಿ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ. ಜೆ.ಎಂ. ಚೆಂದುನವರ ಮಾತನಾಡಿ, ಸಂವಿಧಾನದ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಇಂದು ಪತ್ರಿಕೋದ್ಯಮವಾಗಿದೆ. ಆದರೆ, ಪತ್ರಕರ್ತರು ಪತ್ರಿಕಾರಂಗ ಕೇವಲ ಉದ್ಯಮ ಮಾತ್ರವಲ್ಲ ಎಂಬುದನ್ನು ತೋರಿಸಬೇಕಿದೆ. ವರದಿಗಳು ನಿಷ್ಪಕ್ಷಪಾತವಾಗಿದ್ದಲ್ಲಿ ಅದಕ್ಕೆ ನಿಜವಾದ ಮಹತ್ವ ದೊರೆಯುತ್ತದೆ. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ, ಪ್ರತಿಯೊಂದರಲ್ಲೂ ಒಂದಿಷ್ಟು ಭ್ರಷ್ಟಾಚಾರ ಅಥವಾ ಪಕ್ಷಪಾತವಿರುವ ಈ ವ್ಯವಸ್ಥೆಯಲ್ಲಿ ಕನಿಷ್ಠ ಬದ್ಧತೆ ಉಳಿದಿರುವ ಏಕೈಕ ರಂಗವೆಂದರೆ ಅದು ಪತ್ರಿಕಾರಂಗ ಮಾತ್ರವಾಗಿದೆ. ಈ ರಂಗದ ಬೆನ್ನೆಲುಬಾಗಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಕರ್ತರ ಬದುಕಿಗೆ ಭದ್ರತೆ ದೊರೆಯಬೇಕಿದೆ’ ಎಂದರು.

ಪ್ರತಿ ತಾಲೂಕುಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪತ್ರಿಕಾ ಭವನ ಹಾಗೂ ಪತ್ರಕರ್ತರಿಗೆ ನಿವೇಶನ ಸಿಗಬೇಕಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಕಲ್ಲಪ್ಪ ಮಿರ್ಜಿ ಮಾತನಾಡಿದರು ಜಿಲ್ಲಾಮಟ್ಟದ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿ ಪಡೆದ ಪ್ರಹ್ಲಾದ್ ಗೊಲ್ಲಗೌಡರ ಮತ್ತು ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ ಪಡೆದ ಈರಪ್ಪ ನಾಯ್ಕರ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದಿಂದ ತಾಲೂಕು ಪತ್ರಿಕಾ ವಿತರಿಕರಿಗೆ ಸನ್ಮಾನ ಹಾಗೂ ಜಾಕೆಟ್ ನೀಡಲಾಯಿತು. ಅನ್ನಪೂರ್ಣ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಅನ್ನಪೂರ್ಣ ಹರಮಣ್ಣವರ ಭರತನಾಟ್ಯ ನೃತ್ಯ, ಹಿರಿಯ ಪತ್ರಕರ್ತ ರವಿ ಬಡಿಗೇರ್ ಅವರ ಚಿತ್ರಕಲಾ ಪ್ರದರ್ಶನ, ಗುಡ್ ನ್ಯೂಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಜರುಗಿದವು.

ಇದೇ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಪ್ತ ಸಹಾಯಕರಾದ ಸೋಮಶೇಖರ್ ಬೆನ್ನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮುರಳ್ಳಿ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರಚಾರ್ಯ ಕುಂದರಗಿ, ವಕೀಲ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೆಕಾರ, ಪರಮಾನಂದ ಒಡೆಯರ್, ರಮೇಶ್ ಹುಲ್ತಿಕೋಟಿ. ವರ್ಗಿಸ್ ಕೆ.ಜಿ., ನವೀನಾ ರೆಡ್ಡರ, ಪಿಎಸ್ಐ ಬಸವರಾಜ್ ಯಲ್ಲದಗುಡ್ಡ, ಹಿರಿಯ ಪತ್ರಕರ್ತರಾದ ಎಸ್.ಆರ್. ಪಾಟೀಲ್, ರವಿ ಬಡಿಗೇರ್, ಪ್ರಭಾಕರ್ ನಾಯಕ್, ಪ್ರಕಾಶ್ ಲಮಾಣಿ, ಉಮೇಶ್ ಜೋಶಿ, ರಮೇಶ್ ಸೋಲಾರಗೋಪ್ಪ ,ಪ್ರಕಾಶ್ ಧೂಪದ, ವೀರೇಶ ಹಾರೋಗೇರಿ, ಶಶಿ ಕಟ್ಟಿಮನಿ, ವಿನಾಯಕ್ ಭಟ್, ಸುಭಾಸ ಸುಣಗಾರ, ಪ್ರಭು ರಂಗಾಪುರ, ಮಂಜುನಾಥ ಮಾಳಗಿ, ಸುನಿಲ್ ಕಮ್ಮಾರ, ಬಸವರಾಜ್ ಹುಬ್ಬಳ್ಳಿ ,ಉಪಸ್ಥಿತರಿದ್ದರು.