ಶರಾವತಿಯು ನದಿ ಪಾತ್ರದ ಸಾವಿರಾರು ರೈತರ ಜೀವನಾಡಿ : ರಾಜಧಾನಿ ಬೆಂಗಳೂರಿಗೆ ಒಯ್ಯಲು ವಿರೋಧ

| Published : Aug 12 2024, 01:03 AM IST / Updated: Aug 12 2024, 10:28 AM IST

ಶರಾವತಿಯು ನದಿ ಪಾತ್ರದ ಸಾವಿರಾರು ರೈತರ ಜೀವನಾಡಿ : ರಾಜಧಾನಿ ಬೆಂಗಳೂರಿಗೆ ಒಯ್ಯಲು ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿಯು ನದಿಪಾತ್ರದ ಸಾವಿರಾರು ರೈತರ ಜೀವನಾಡಿಯಾಗಿದೆ. 8ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ ಇಲ್ಲಿನ ಸಾವಿರಾರು ರೈತರ ಭೂಮಿಗೆ ನೀರುಣಿಸುತ್ತಿದೆ.

ಹೊನ್ನಾವರ: ಶರಾವತಿಯಿಂದ ರಾಜಧಾನಿ ಬೆಂಗಳೂರು ಮತ್ತು ಮಧ್ಯ- ಪೂರ್ವ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಕೆರೆ ತುಂಬಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಶರಾವತಿಯು ನದಿಪಾತ್ರದ ಸಾವಿರಾರು ರೈತರ ಜೀವನಾಡಿಯಾಗಿದೆ. 8ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ ಇಲ್ಲಿನ ಸಾವಿರಾರು ರೈತರ ಭೂಮಿಗೆ ನೀರುಣಿಸುತ್ತಿದೆ. ಇಡಗುಂಜಿ, ಮುರ್ಡೇಶ್ವರ ಯಾತ್ರಾ ಸ್ಥಳವೂ ಸೇರಿದಂತೆ ಹೊನ್ನಾವರ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಸಹಸ್ರಾರು ಜನರ ಕುಡಿಯುವ ನೀರಿನ ಬವಣೆಯನ್ನು ಶರಾವತಿ ನೀಗಿಸುತ್ತಿದೆ. ವಿದ್ಯುತ್ ಉತ್ಪಾದನೆಯ ನಂತರ ಸಮುದ್ರಕ್ಕೆ ಹರಿದುಹೋಗುವ ನೀರಿನ ಪ್ರಮಾಣದಲ್ಲಿ ಶರಾವತಿ ನದಿಯಿಂದ ಸುಮಾರು 25 ಟಿಎಂಸಿಗಿಂತ ಹೆಚ್ಚಿನ ಪ್ರಮಾಣದ ನೀರು ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಈ ನಡುವೆ ಶರಾವತಿ ನದಿಯ ನೀರನ್ನು ರಾಜಧಾನಿ ಬೆಂಗಳೂರು ಮತ್ತು ಪೂರ್ವ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ಆ ಭಾಗದ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಸಾಧ್ಯತಾ ವರದಿ ಪಡೆಯಲು ಸರ್ಕಾರ ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ ಇತ್ತೀಚೆಗೆ ಟೆಂಡರ್ ಕರೆದಿತ್ತು. ಈಗ ಬೆಂಗಳೂರಿನ ಈಐ ಟೆಕ್ನಾಲಜಿಸ್ ಖಾಸಗಿ ಕಂಪನಿಯು ₹73 ಲಕ್ಷಕ್ಕೆ ಟೆಂಡರ್ ಪಡೆದು ಸಮೀಕ್ಷೆಗೆ ಮುಂದಾಗಿದೆ.

ಆದರೆ ಸಮುದ್ರ ಸೇರುತ್ತಿರುವ ಶರಾವತಿ ನೀರು ನದಿಪಾತ್ರದ ಸಾವಿರಾರು ರೈತರ ಜಮೀನಿನ ನೀರಾವರಿಗೆ ಮತ್ತು ಹೊನ್ನಾವರ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಗಳಿಗೆ ಹಾಗೂ ಮುರ್ಡೇಶ್ವರ, ಇಡಗುಂಜಿ ಯಾತ್ರಾ ಸ್ಥಳಗಳಿಗೆ ಕುಡಿಯುವ ನೀರು ಪೂರೈಸಲು ಸುಮಾರು 25 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಈಗಾಗಲೇ ಬಳಕೆಯಾಗುತ್ತಿದೆ.

ಇದರಿಂದಾಗಿ ಬೇಸಿಗೆಯಲ್ಲಿ ನದಿನೀರು ಸಮುದ್ರ ಸೇರುವ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಉಬ್ಬರದ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರು ಶರಾವತಿ ನದಿಯ 25 ಕಿಮೀ ಉದ್ದಕ್ಕೂ ಹಿಮ್ಮುಖವಾಗಿ ಸೇರುತ್ತಿದೆ. ಇದು ಸಿಹಿ ನೀರಿನ ಕೊರತೆಯನ್ನು ಸೂಚಿಸುತ್ತಿದೆ. 

ಆದ್ದರಿಂದ ಶರಾವತಿ ನದಿಪಾತ್ರದ ಸಾವಿರಾರು ರೈತರ ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಇಲ್ಲಿನ ಲಕ್ಷಾಂತರ ಜನರ ಹಿತದೃಷ್ಟಿಯಿಂದ ಶರಾವತಿಯಿಂದ ರಾಜಧಾನಿ ಬೆಂಗಳೂರು ಮತ್ತಿತರ ಕಡೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸರ್ಕಾರ ಈ ಹಂತದಲ್ಲಿಯೇ ಕೈಬಿಟ್ಟು, ಈಐ ಟೆಕ್ನಾಲಜಿಸ್ ಕಂಪನಿಗೆ ನೀಡಿರುವ ಟೆಂಡರನ್ನು ಹಿಂಪಡೆಯಬೇಕೆಂದು ಹಿರಿಯ ಸಾಮಾಜಿಕ ಕಾರ್ಯಕರ್ತ, ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.ಜಿಲ್ಲಾಡಳಿತದಿಂದ ವೈಜ್ಞಾನಿಕ ಅಧ್ಯಯನ ನಡೆಸಲು ಅಗತ್ಯ ಕ್ರಮಗಳು ಆಗಬೇಕು. ವೈಜ್ಞಾನಿಕವಾಗಿ ಅಧ್ಯಯನ ನಡೆಸದೇ ಶರಾವತಿ ನದಿಯಿಂದ ಬೇರೆ ಜಿಲ್ಲೆ, ತಾಲೂಕುಗಳಿಗೆ ಹೊಸದಾಗಿ ಕುಡಿಯುವ ನೀರು ಪೂರೈಸುವ ಮತ್ತು ಏತ ನೀರಾವರಿ ಯೋಜನೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದಿದ್ದಾರೆ.