ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಪ್ರವಚನದ ಮೂಲಕ ಸಮಾಜ ಸುಧಾರಣೆ ಜೊತೆಗೆ ಶಿಕ್ಷಣ ದಾಸೋಹ ನಡೆಸಿದ ಶ್ರೀಗಳನ್ನು ಸ್ಮರಿಸುವ ಕಾರ್ಯ ಸಿದ್ದೇಶ್ವರ ಸಂಸ್ಥೆಯಿಂದ ಸದಾ ನಡೆಯುತ್ತಿದೆ. ಶ್ರೀಗಳು ಎಲ್ಲೆಲ್ಲಿ ಪ್ರವಚನ ಮಾಡಿದ್ದಾರೆ, ಅವರ ಕಾರ್ಯ, ಸಾಧನೆಗಳ ಬಗ್ಗೆ ದಾಖಲೆ ಸಂಗ್ರಹಿಸಿಡುವ ಮಹತ್ಕಾರ್ಯ ಕೂಡ ಸಿದ್ದೇಶ್ವರ ಸಂಸ್ಥೆಯಿಂದ ಮಾಡಿದ್ದೇವೆ ಎಂದು ನಗರ ಶಾಸಕ ಹಾಗೂ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಕವಲಗಿಯಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಂಥನಾಳ ಸಂಗನಬಸವ ಶಿವಯೋಗಿಗಳ 126ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ದಾಸೋಹಿ ಹೆಸರಿನಲ್ಲಿಯೇ ಶಾಲೆ-ಕಾಲೇಜು ನಡೆಸಲಾಗುತ್ತಿದೆ. ಸಂಗನಬಸವ ವಸತಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.98ಕ್ಕೂ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳ ಎರಡು ವರ್ಷದ ಪ್ರವೇಶ ಮೊತ್ತವನ್ನು ಮರಳಿ ಕೊಡಲಾಗುವುದು. ಅದನ್ನು ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ದಿಂದ ಭರಿಸುವುದಾಗಿ ಘೋಷಿಸಿದರು.

ಸಿದ್ದೇಶ್ವರ ಸಂಸ್ಥೆ ಲೋಕಕಲ್ಯಾಣ ಟ್ರಸ್ಟ್ ಅಡಿ ಮೆಡಿಕಲ್ ಕಾಲೇಜು ಕೂಡ ಆರಂಭಿಸುವುದಾಗಿ ತಿಳಿಸಿದ ಅವರು, ಶ್ರೀ ಸಿದ್ದೇಶ್ವರ ಸಂಸ್ಥೆಗೆ ನೀಡುವ ದಾನ, ಪ್ರವೇಶ ಶುಲ್ಕ ಎಲ್ಲವೂ ಒಳ್ಳೆಯ ಕಾರ್ಯಕ್ಕೆ ಬಳಕೆ ಆಗುತ್ತದೆ. ಜನ ಯಾವುದೇ ರೂಪದಲ್ಲಿ ಹಣ ನೀಡಿದರೂ ಅದು ಸಮಾಜಕ್ಕೆ ಉಪಯೋಗವಾಗುತ್ತದೆ. ಯಾವ ಸಂಸ್ಥೆಗಳು ನಮ್ಮ ಸ್ವಂತದಲ್ಲ, ಎಲ್ಲವೂ ಟ್ರಸ್ಟ್ ಅಡಿಯಲ್ಲೇ ನಡೆಯುತ್ತಿವೆ ಎಂದು ಹೇಳಿದರು. ಒಬ್ಬ ವ್ಯಕ್ತಿ ಬೆಳೆದರೆ, ಆತನ ಕುಟುಂಬಕ್ಕೆ ಮಾತ್ರ ಒಳ್ಳೆಯದಾಗಬಹುದು. ಅದೇ ಒಂದು ಸಂಸ್ಥೆ ಬೆಳೆದರೆ ಇಡೀ ಸಮಾಜಕ್ಕೆ ಅನೇಕ ರೀತಿಯಲ್ಲಿ ನೆರವಾಗುತ್ತದೆ ಎನ್ನುವುದಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯೇ ಸಾಕ್ಷಿ. ಸಂಸ್ಥೆಯಿಂದ ಧಾರ್ಮಿಕ ಕಾರ್ಯದ ಜೊತೆಗೆ ಅನ್ನ ದಾಸೋಹ, ಶಿಕ್ಷಣ, ಆರೋಗ್ಯ, ಗೋವು ಸೇವೆ ಸೇರಿ ಸಮಾಜ ಸುಧಾರಣೆ ಕಾರ್ಯಗಳು ನಿರಂತರವಾಗಿ ಸಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ನೀಡಿ, ಲೀಲಾ ಪುರುಷ ಶ್ರೀ ಬಂಥನಾಳ ಸ್ವಾಮಿಯವರು ಶಾಲೆಯೇ ದೇವಾಲಯ ಮಕ್ಕಳೇ ದೇವರು. ಸಮಾಜವೇ ನನ್ನ ಉಸಿರು ಸಮಾಜವೇ ನನ್ನ ತಂದೆ ತಾಯಿ ತಿಳಿದು, ಭಕ್ತರು ನೀಡಿದ ಬಂಗಾರವನ್ನು ಮಕ್ಕಳ ಶಿಕ್ಷಣಕ್ಕಾಗಿ ಧಾರೆಯೆರೆದು ಬಾಳಿ ಬೆಳಗಿದ ದ್ವಿತೀಯ ಬಸವಣ್ಣನವರು ಎಂದು ಸಂಗನಬಸವ ಸ್ವಾಮೀಜಿಯವರ ಸಾಧನೆಯನ್ನು ಸ್ಮರಿಸಿದರು.


ಮುಖ್ಯ ಅತಿಥಿ ಖ್ಯಾತ ವಾಗ್ಮಿ ಅಶೋಕ ಹಂಚಲಿ ವಿದ್ಯಾರ್ಥಿ ಪರಿಷತ್ತಿನ ಮುಖಂಡರ ಪದಗ್ರಹಣ ಸಮಾರಂಭ ನೇರೆವೇರಿಸಿ ಮಾತನಾಡಿ, ಮಕ್ಕಳನ್ನು ಕೇವಲ ಅಂಕ ಗಳಿಸುವವರನ್ನಾಗಿ ಮಾಡದೇ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬೆಳೆಸುವಂತಹ ಮಕ್ಕಳನ್ನಾಗಿ ರೂಪಿಸಬೇಕು. ಸಣ್ಣ ಹಳ್ಳಿ ಮಸೂತಿ ಗ್ರಾಮದಲ್ಲಿ ಜನ್ಮತಾಳಿದ ಬಂಥನಾಳ ಸಂಗನಬಸವ ಶಿವಯೋಗಿಗಳು ಜಿಲ್ಲೆಯಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ ಮಹಾನ್ ಸಂತರು ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯೆ ಶರ್ಮಿಳಾ ಹೇಮಂತ, ಕಾಲೇಜಿನ ನಿರ್ದೇಶಕ ಪ್ರಾಂಶುಪಾಲ ಹೇಮಂತಕೃಷ್ಣ, ಉಪನ್ಯಾಸಕರಾದ ಅಪೂರ್ವ ಬಗಲಿ, ಶಶಿಕಲಾ ಸರಬಡಗಿ, ಪ್ರಶಾಂತ ಪಾಟೀಲ, ರೇವತಿ ಶಿಂಧೆ, ಪ್ರತೀಕ ಅಕ್ಕೊಲೆ, ಗೀತಾ ಸಜ್ಜನ, ವಿದ್ಯಾರ್ಥಿಗಳಾದ ಶೀಲಾ ಬಗಲಿ, ಅನ್ನಪೂರ್ಣ ಬಿರಾದಾರ, ತೇಜಶ್ವಿನಿ ಅಳ್ಳೊಳ್ಳಿ, ಆರುಷಿ ರಾಠೋಡ, ತನುಶ್ರೀ ಡಂಬಳ, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಪಾಲಕರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.