ಸಾರಾಂಶ
ವಿಜಯನಗರ ಜಿಲ್ಲಾದ್ಯಂತ ಮುಸ್ಲಿಂ ಸಮಾಜದವರು ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಮುಸ್ಲಿಂ ಸಮಾಜದವರು ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಈದ್-ಈ-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್ ಮಿಲಾದ್ ಹಬ್ಬವನ್ನು ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ಮುಸ್ಲಿಂ ಸಮಾಜದವರು ಆಚರಿಸಿದರು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಯುವಕರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಹಸಿರು ವರ್ಣದ ಧ್ವಜಗಳು ರಾರಾಜಿಸಿದವು. ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್ ಮಿನಾರ್ ಪ್ರತಿಕೃತಿಗಳು ಗಮನ ಸೆಳೆದವು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಚಿತ್ತವಾಡ್ಗಿ ರಸ್ತೆ, ಶ್ರಮಿಕ ಭವನ, ರಾಮ ಟಾಕೀಸ್, ಮೂರಂಗಡಿ ವೃತ್ತ, ಬಸ್ ನಿಲ್ದಾಣ, ರೋಟರಿ ವೃತ್ತದ ಮೂಲಕ ಸಾಗಿತು. ಮೆರವಣಿಗೆಯಲ್ಲಿ ಜ್ಯೂಸ್, ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಮೌಲಿದ್ ಮತ್ತು ನಬಿದ್ ಎಂದೂ ಕರೆಯಲ್ಪಡುವ ಈದ್ ಮಿಲಾದ್- ಉನ್- ನಬಿ ಮುಸ್ಲಿಮರಿಗೆ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಪ್ರವಾದಿ ಮೊಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ. ರಬಿ ಉಲ್ ಅವ್ವಾಲ್‌ನ ೧೨ನೇ ದಿನದಂದು ಆಚರಿಸಲಾಗುವ ಈ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರದಿಂದ ಆಚರಿಸಿದರು.ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾಗಿದೆ. ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಅದಲ್ಲದೇ ಜನಿಸಿದ ಅದೇ ದಿನಾಂಕದಂದು ಅವರು ಮರಣ ಹೊಂದಿದ್ದರು ಎನ್ನಲಾಗಿದೆ. ಈ ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದು ಕೂಡ ಕರೆಯುತ್ತಾರೆ.
ಧಾರ್ಮಿಕ ಸಭೆ: ನಗರದ ಹಕ್ಕಬುಕ್ಕ ರಸ್ತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಸಭೆಯಲ್ಲಿ ಹುಡಾ ಅಧ್ಯಕ್ಷ ಎಚ್.ಎನ್. ಇಮಾಮ್ ನಿಯಾಜಿ, ವಕ್ಫ್ ಸಮಿತಿಯ ಜಿಲ್ಲಾಧ್ಯಕ್ಷ ದಾದಾಪೀರ್, ಅಂಜುಮನ್ ಕಮಿಟಿ ಪದಾಧಿಕಾರಿಗಳಾದ ಎಂ. ಫಿರೋಜ್ ಖಾನ್, ಎಂ.ಡಿ. ಅಬೂಬಕ್ಕರ್, ಜಿ. ಅನ್ಸರ್ ಬಾಷಾ, ಸಹಕಾರ್ಯದರ್ಶಿ ಡಾ.ಎಂ.ಡಿ. ದುರ್ವೇಶ್ ಮೈನುದ್ದೀನ್, ಸದ್ಯಸರಾದ ಕೋತ್ವಾಲ್ ಮೊಹಮ್ಮದ್ ಮೋಸಿನ್, ವಕೀಲ ಸದ್ದಾಮ್ ಮತ್ತು ಎಲ್. ಗುಲಾಮ್ ರಸೂಲ್, ಬಡಾವಲಿ ಇತರರಿದ್ದರು.