ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಛಲವಾದಿ ಸಮುದಾಯ ಒಂದು ವಿಶಿಷ್ಟವಾದ ಸಮುದಾಯ. ಇದನ್ನು ಇಡೀ ದೇಶವನ್ನು 32 ವರ್ಷಗಳ ಕಾಲ ಸಂಚಾರ ಮಾಡಿ, 17ರಲ್ಲಿ ಪ್ರಂಚ್ ಆರ್ಥರ್ ಬರೆದ ಹಿಂದು ಕಸ್ಟಮ್ಸ್ ಅಂಡ್ ಪ್ರಾಕ್ಟಿಸಸ್ ಎಂಬ ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ಹರ್ತಿ ಪತ್ತಿನ ಸಹಕಾರ ಸಂಘದ 30ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳದ ನಂಬೂದರಿ ಬ್ರಾಹ್ಮಣರಿಂದ ಹಿಡಿದು,ಎಲ್ಲಾ ವರ್ಗದವರ ಅಧ್ಯಯನ ಮಾಡಿ ನಮೂದಿಸಿದ್ದಾರೆ. ಅವರ ಪುಸ್ತಕದಲ್ಲಿ ಛಲವಾದಿಗಳೆಂದರೆ ಯಾರು, ಅವರನ್ನು ಯಾಕೇ ಈ ಹೆಸರಿನಿಂದ ಕರೆಯುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಆಂಧ್ರ ಪ್ರದೇಶದ ಮಾರ, ಮಹಾರಾಷ್ಟ್ರದ ಮಹರ್, ಕರ್ನಾಟಕದ ಛಲವಾದಿ ಎಲ್ಲವೂ ಒಂದೇ ಸಮುದಾಯ. ಬಹಳ ಸ್ವಾಭಿಮಾನ ಮತ್ತು ಹಠವಾದಿಗಳು ಎಂಬುದನ್ನು ಹೆಸರಿಸಿದ್ದಾರೆ. ಭೀಮ ಕೋರೆಗಾವ್ ಯುದ್ದದ ಉಲ್ಲೇಖವೂ ಇದೆ ಎಂದರು.ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರದಲ್ಲಿ ಈ ಜನಾಂಗಕ್ಕೆ ಶಕ್ತಿಯನ್ನು ಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್, ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದದಿದ್ದರೆ ಈ ಭೂಮಿಯ ಮೇಲೆ ಬದುಕಿದ್ದು ಸತ್ತಂತೆ. ಹಾಗಾಗಿ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು,ಈ ದೇಶದ ಜನರು ಬಾಬಾ ಸಾಹೇಬರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುವ ಉದ್ದೇಶದಿಂದ ಬೀದರ್‌ನಿಂದ ಚಾಮರಾಜನಗರದವರೆಗೆ ಸುಮಾರು 2500 ಕಿ.ಮಿ. 25 ಲಕ್ಷಕ್ಕೂ ಹೆಚ್ಚು ಜನ ಮಾನವ ಸರಪಳಿ ನಿರ್ಮಿಸಿ, ಗಿನ್ನಿಸ್ ರೆಕಾರ್ಡ್ ಮಾಡಲಾಗಿದೆ ಎಂದರು.ನಮ್ಮ ಮುಂದಿನ ಪೀಳಿಗೆಗೆ ಈ ಜಾತಿ,ಧರ್ಮದ ಕೀಳಿರಿಮೆಯನ್ನ ಬಿಟ್ಟು ಎಲ್ಲಾ ವಿಭಾಗದಲ್ಲಿಯೂ ಸಮರ್ಥವಾಗಿ ಸಾಧನೆ ಮಾಡುವಂತಹ ವಾತಾವರಣ ಸೃಷ್ಟಿಸಬೇಕಿದೆ. ಮೆಡಿಕಲ್, ಎಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ ವಿಷಯದಲ್ಲಿ ಸಮರ್ಥರಾಗಬೇಕು. ರಾಜಕೀಯವಾಗಿಯೂ ಬೆಳೆಯುವಂತಹ ರಾಜಕೀಯ ಜ್ಞಾನ ರೂಪಿಸಬೇಕಿದೆ.ಆಗ ಮಾತ್ರ ನಾವು ದೇಶದಲ್ಲಿ ಮುನ್ನೆಡೆ ಸಾಧಿಸಲು ಸಾಧ್ಯ. ಛಲವಾದಿ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ಒಂದು ಕೋಟಿ ರುಗಳು ಠೇವಣಿ ನೀಡುವುದಾಗಿ ಡಾ.ಜಿ.ಪರಮೇಶ್ವರ್ ಘೋಷಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ.ಕಾವಾಲಮ್ಮ ಛಲವಾದಿ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಮುಖ್ಯಮಂತ್ರಿ ಕುರ್ಚಿಯಿಂದ ವಂಚಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಎಲ್ಲರೂ ಲೀಡರ್‌ಗಳಾಗಿದ್ದಾರೆ. ಅನುಯಾಯಿಗಳಾಲು ಸಿದ್ದರಿಲ್ಲ. ಜನಾಂಗಕೋಸ್ಕರ ಸ್ವಾರ್ಥ ಬಿಟ್ಟರೆ ಮಾತ್ರ ರಾಜಕೀಯದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.ಇದೇ ವೇಳೆ ಛಲವಾದಿ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಚಲವಾದಿ ಸಾಂಸ್ಕೃತಿಕ ಸಂಘದ ಡಾ.ಪಿ.ಚಂದ್ರಪ್ಪ, ಚಂದ್ರಶೇಖರ್, ಎಸ್.ರಾಜಣ್ಣ ಸಚಿವರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಲ್ಲಸಂದ್ರ ಹಾಲು ಒಕ್ಕೂಟದ ಎಂ.ಡಿ. ಶ್ರೀನಿವಾಸ್, ಸಹಕಾರಿ ಸಂಘದ ಉಪಾಧ್ಯಕ್ಷ ವಿ.ಮೋಹನ್ ಕುಮಾರ್,ನಿರ್ದೆಶಕರುಗಳಾದ ಡಾ.ವೈ.ದಾಸಪ್ಪ, ಸಿ.ಹೆಚ್.ಲಕ್ಷ್ಮಯ್ಯ, ಟಿ.ಸಿ.ವಿಜಯಕುಮಾರ್, ಎಚ್.ಬಿ.ಪುಟ್ಟಬೋರಯ್ಯ, ಬಿ.ಜಿ.ಲಿಂಗರಾಜು, ಡಿ.ಎಚ್.ವಸಂತಕುಮಾರ್, ಆರ್.ಕೆ.ದೃವಕುಮಾರ್, ಬಿ.ಎಸ್.ದಿನೇಶ್, ಲಕ್ಷ್ಮಿಪುತ್ರ, ಡಾ.ಎನ್.ಸತೀಶ್‌ಬಾಬು, ಜಿ.ಟಿ.ಪಾವರ್ತಮ್ಮ, ಜಿ.ವಿಜಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ಮಕ್ಕಳಿಗೆ ಪ್ರತಿಭಾಪುರಸ್ಕಾರ ನಡೆಸಲಾಯಿತು.