ಸಾರಾಂಶ
ಗೋಕರ್ಣ: ಕೇವಲ ನಮ್ಮ ಶ್ವಾಸವನ್ನು ತಿಳಿದುಕೊಂಡು ಇಡೀ ನಮ್ಮ ಜೀವನದ ಭವಿಷ್ಯ ಹೇಳುವ ಅಪೂರ್ವ ಕೌಶಲ ನಮ್ಮದಾಗಿತ್ತು. ಆದರೆ ಪೂರ್ವಜರು ನೀಡಿದ ಇಂಥ ಮಹತ್ವದ ಶಾಸ್ತ್ರಗಳನ್ನು ಮರೆತಿರುವುದು ದುರದೃಷ್ಟಕರ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಸೋಮವಾರ ಕಾಲ ಸರಣಿಯ ಪ್ರವಚನ ಅನುಗ್ರಹಿಸಿದರು.
ಪ್ರಾಣ ಅಪಾನಗಳು ನಮ್ಮ ಇಡೀ ಜೀವನವನ್ನು ನಡೆಸುವ, ನಿಯಂತ್ರಿಸುವ ಶಕ್ತಿಗಳು. ಪ್ರಾಣವನ್ನು ದೀರ್ಘ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅಪಾನವನ್ನು ವೃದ್ಧಿಸುವುರಿಂದ ಸ್ಥೂಲವಾಗುತ್ತಾ ಹೋಗುತ್ತಾರೆ. ನಮ್ಮ ಪ್ರಾಣಾಪಾನದ ಮೂಲಕ ನಮ್ಮ ಭವಿಷ್ಯವನ್ನೂ ತಿಳಿದುಕೊಳ್ಳಬಹುದು ಎಂದರು.ಶ್ವಾಸದಲ್ಲಿ ಪಂಚಭೂತಗಳ ವಿಷಯವಿದೆ. ಶ್ವಾಸ ಎಲ್ಲಿದೆ ಎನ್ನುವುದನ್ನು ತಿಳಿದುಕೊಂಡರೆ ಫಲವನ್ನು ತಿಳಿದುಕೊಳ್ಳಬಹುದು. 6 ಅಂಗುಲದ ಶ್ವಾಸ ಪೃಥ್ವಿ, 12 ಅಂಗುಲ ಜಲ, 8 ಅಂಗುಲವಿದ್ದರೆ ಅಗ್ನಿ, ಆರು ಅಂಗುಲ ಇದ್ದರೆ ವಾಯು, 3 ಅಂಗುಲ ಇದ್ದರೆ ಆಕಾಶ. 16 ಅಂಗುಲಕ್ಕಿಂತಲೂ ಹೆಚ್ಚು ದೀರ್ಘ ಶ್ವಾಸ ಹೊಂದಿರುವರಿದ್ದಾರೆ ಎಂದರು.ಅಷ್ಟಮ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನಮ್ಮ ಪರಂಪರೆಯ 33ನೇ ಯತಿಗಳು. ತಮ್ಮ ಮುಕ್ತಿಯ ದಿನವನ್ನು ಮೊದಲೇ ಕಂಡುಕೊಂಡಿದ್ದು, ಶಿಷ್ಯರನ್ನು ಕರೆದು ಕೊನೆಯ ಮಂತ್ರಾಕ್ಷತೆಯನ್ನೂ ಅನುಗ್ರಹಿಸಿದ್ದರು. ಮುಕ್ತಿಗಾಗಿ ಕಾಶಿಗೆ ಹೋಗಲು ಸಮಯವಿಲ್ಲ. ದಕ್ಷಿಣ ಕಾಶಿ ಎನಿಸಿದ ಗೋಕರ್ಣಕ್ಕೆ ಹೋಗಲು ಮಾತ್ರ ಸಮಯಾವಕಾಶವಿದೆ ಎಂದು ತಿಳಿದುಕೊಂಡು, ಉತ್ತರಾಧಿಕಾರಿಗಳಿಗೆ ಅಧಿಕಾರ ವಹಿಸಿ, ರಾಮಮುದ್ರೆಯನ್ನು ನಂಬಿ ಬದುಕಿ ಎಂದು ಶಿಷ್ಯರಿಗೆ ಆಶೀರ್ವಾದ ಮಾಡಿ ಹೊರಟಾಗ ಇಡೀ ಮಠವೇ ಕತ್ತಲಾಯಿತು ಎಂದು ಮಠದ ದಿನಚರಿಯಲ್ಲಿ ಉಲ್ಲೇಖವಿದೆ ಎಂದರು.
ಮುಕ್ರಿ ಸಮಾಜ ಮತ್ತು ಸವಿತಾ ಸಮಾಜದ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಶ್ರೀಮಠದ ಪರಂಪರೆಯ 33ನೇ ಗುರುಗಳಾದ ಅಷ್ಟಮ ರಾಘವೇಶ್ವರ ಭಾರತೀಸ್ವಾಮಿಗಳ ಜೀವನ- ಸಾಧನೆ, ಅವರ ಅಧ್ಯಯನ ಗ್ರಂಥಗಳು, ಪತ್ರಗಳು, ದಿನಚರಿಯ ಅನಾವರಣವನ್ನು ಚಂದ್ರಶೇಖರ ಬಡಗಣಿ ನೆರವೇರಿಸಿದರು.ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.