ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತಟದ ಕುರುವತ್ತಿಯ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಶಿವರಾತ್ರಿ ಅಮವಾಸ್ಯೆಯಂದು ಸಂಜೆ ಜರುಗಲಿದೆ.

ಫೆ. 12ರಿಂದ 18ರ ವರೆಗೂ ಜಾತ್ರೆ ನಡೆಯಲಿದ್ದು, ಈಗಾಗಲೇ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಕಂಕಣಧಾರಣ ಸೇವೆ ಮಾಡಿ, ನಂತರದಲ್ಲಿ ಉತ್ಸವ ಮೂರ್ತಿಯನ್ನು ಪ್ರಭಾವಳಿಯಲ್ಲಿ ಇಟ್ಟು ತುಂಗಭದ್ರಾ ನದಿಗೆ ತೆರಳಿ, ಸುಕ್ಷೇತ್ರದ ಸಿಂಹಾಸನ ಕಟ್ಟೆವರೆಗೂ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗಿದೆ.

ಮಹಾಶಿವರಾತ್ರಿ ದಿನದಂದು ತೇರಿಗೆ ಕಳಸ ಇಡಲಾಗಿದೆ. ಫೆ. 17ರಂದು ಮಹಾ ಶಿವರಾತ್ರಿ ಅಮಾವಾಸ್ಯೆ ಸಂಜೆ 4.30ಕ್ಕೆ ಲಕ್ಷಾಂತರ ಭಕ್ತರ ಜಯ ಘೋಷದ ಮಧ್ಯೆ ಸಂಭ್ರಮದ ರಥೋತ್ಸವ ಜರುಗಲಿದೆ.

ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಶತಮಾನಗಳ ಕಾಲ ಇತಿಹಾಸ ಹೊಂದಿರುವ ಬಸವೇಶ್ವರ ರಥೋತ್ಸವ ಗ್ರಾಮೀಣ ಸೊಗಡಿನ ಪರಂಪರೆ ಇನ್ನೂ ಜೀವಂತವಾಗಿದೆ. ಉತ್ತರ ಕರ್ನಾಟಕ ಭಾಗದ ಅತಿ ದೊಡ್ಡ ಜಾತ್ರೆಗೆ ರಾಣಿಬೆನ್ನೂರು, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ವಿಜಯನಗರ, ಹೂವಿನಹಡಗಲಿ, ಬೆಳಗಾವಿ, ವಿಜಯಪುರ ಸೇರಿದಂತೆ ಹತ್ತಾರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.


ತುಂಗಭದ್ರೆಯ ತಟದ ಕುರುವತ್ತಿ ದೇವಸ್ಥಾನ ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ಸುಂದರ ಶಿಲ್ಪಕಲಾ ಶ್ರೀಮಂತಿಕೆ ಹೊಂದಿದೆ. ಈ ಪುರಾತನ ಕಾಲದ ದೇವಸ್ಥಾನದಲ್ಲಿ 6 ಅಡಿ ಎತ್ತರದ ನಂದಿ ಮೂರ್ತಿ, 4 ಅಡಿ ಎತ್ತರದ ಶಿವಲಿಂಗು (ಮಲ್ಲಿಕಾರ್ಜುನ ಸ್ವಾಮಿ) ಇದೆ.

ಕುರುವತ್ತಿಗೆ ಪೌರಾಣಿಕ ಹಿನ್ನೆಲೆಯ ಪ್ರಕಾರ ಇಲ್ಲಿನ ತುಂಗಭದ್ರಾ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಶಿವ ಮಲ್ಲಿಕಾರ್ಜುನ ಲಿಂಗ ರೂಪದಲ್ಲಿ ಅವತರಿಸಿ, ದಾನವರನ್ನು ಸಂಹರಿಸಿದ್ದಾನೆಂದು ಪ್ರತೀತಿ ಇದೆ.

ಕುರುವತ್ತಿಯನ್ನು ಕಲ್ಯಾಣಿ ಚಾಲುಕ್ಯ ವಂಶದ ದೊರೆ ಒಂದನೇ ಸೋಮೇಶ್ವರ (ಕ್ರಿ.ಶ.1044-ಕ್ರಿ.ಶ.1068) ತನ್ನ ಆಳ್ವಿಕೆಯಲ್ಲಿ ಸುಂದರ ಕಲಾಕೃತಿಯುಳ್ಳ ತೀರಾ ಅಪರೂಪದ ದೇವಾಲಯ ನಿರ್ಮಿಸಿದ್ದಾನೆ ಎಂದು ಇಲ್ಲಿನ ಶಿಲಾಶಾಸನದಿಂದ ತಿಳಿದು ಬರುತ್ತದೆ.

ಮೂಲಭೂತ ಸೌಲಭ್ಯ

ಇಲ್ಲಿನ ಕುರುವತ್ತಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ, ವಿವಿಧ ಇಲಾಖೆಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕುಡಿಯುವ ನೀರು, ನೈರ್ಮಲ್ಯ, ಧೂಳು ಮುಕ್ತ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಜಾನುವಾರುಗಳಿಗೆ ನೀರಿನ ಕೊಳಾಯಿಗಳು, ಕಲುಷಿತ ನೀರು ಸರಾಗವಾಗಿ ಹರಿದು ಹೋಗಲು ಮಣ್ಣಿನ ಚರಂಡಿ ನಿರ್ಮಾಣ, ನದಿ ತೀರದಲ್ಲಿ ತಾತ್ಕಾಲಿಕ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಮಾಡಲಾಗಿದೆ.

ಮಾಹಿತಿ ನೀಡದ ಮುಜರಾಯಿ ಇಲಾಖೆ

ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಎ ಗ್ರೇಡ್‌ ಪಡೆದಿದೆ. ಜಾತ್ರೆ ಹಾಗೂ ರಥೋತ್ಸವ ಕುರಿತು ಮಾಧ್ಯಮಕ್ಕೆ ಕನಿಷ್ಠ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದ ಭಕ್ತರಿಗೆ ತೀರಾ ಗೊಂದಲ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ನೀಡಿರುವ ಆದ್ಯತೆಯನ್ನು ಕುರುವತ್ತಿ ದೇವಸ್ಥಾನಕ್ಕೆ ನೀಡುವಲ್ಲಿ ದೇವಸ್ಥಾನದ ಇಒ ಹಾಗೂ ಮುಜರಾಯಿ ಇಲಾಖೆ ಸಹಾಯಕ ಆಯುಕ್ತರು ಮುಂದಾಗುತ್ತಿಲ್ಲ, ಇತರೆ ದೇವಸ್ಥಾನಗಳಿಗೆ ನೀಡುವ ರೀತಿಯಲ್ಲಿ ಪ್ರಚಾರ ನೀಡುತ್ತಿಲ್ಲ. ಮುಂದೊಂದು ದಿನ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ನಿಲ್ಲಬೇಕಾಗುತ್ತದೆ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.

ಉದ್ಧಟತನ ಹೇಳಿಕೆ

ಜಾತ್ರೆಯ ಮಾಹಿತಿ ಬೇಕಾದರೆ ದೇವಸ್ಥಾನದ ಅಧಿಕಾರಿಗಳ ಬಳಿ ಹೋಗಿ, ನನ್ನ ಕೇಳಿದರೇ ಹೇಗೆ? ಎಂದು ಮುಜರಾಯಿ ಇಲಾಖೆ ಆಯುಕ್ತೆ ಸವಿತಾ ಹೇಳುತ್ತಾರೆ, ಇತ್ತ ದೇವಸ್ಥಾನದ ಇಒ ಮಲ್ಲಪ್ಪ ಜಾತ್ರೆ, ರಥೋತ್ಸವ ಕರ ಪತ್ರಗಳು ಬೇಕಾದರೆ ದೇವಸ್ಥಾನಕ್ಕೆ ಬಂದು ತೆಗೆದುಕೊಂಡು, ಹೋಗಿ ಎಂದು ಉದ್ದಟನದ ಹೇಳಿಕೆ ನೀಡುತ್ತಾರೆ.