ಸಾರಾಂಶ
ಭಗವದ್ಗೀತೆಯು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು.
ಧಾರವಾಡ:
ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯ ಮತ್ತು ಸಂಸ್ಕಾರ ನೀಡುವಲ್ಲಿ ಭಗವದ್ಗೀತೆ ಪಾತ್ರ ಬಹಳ ಇದೆ. ಯುವ ಸಮುದಾಯ ಭಗವದ್ಗೀತೆ ಓದಬೇಕು, ಅದರಲ್ಲಿನ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಎಂದು ನಿವೃತ್ತ ಆಕಾಶವಾಣಿ ಉದ್ಘೋಷಕ ಡಾ. ಶಶಿಧರ ನರೇಂದ್ರ ಹೇಳಿದರು.ಕರ್ನಾಟಕ ಕಾಲೇಜಿನ ಸಂಸ್ಕೃತ, ಪ್ರಾಕೃತ ಹಾಗೂ ಯೋಗ ವಿಭಾಗವು ಸೋಮವಾರ ಆಯೋಜಿಸಿದ್ದ ಗೀತಾ ಜಯಂತಿ ಆಚರಣೆಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯವಾದ ಯುಕ್ತಿ-ಭಕ್ತಿ ಹಾಗೂ ಶಕ್ತಿ ಇವುಗಳನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ ಎಂದು ಉಲ್ಲೇಖಿಸಿದ ಅವರು, ಭಗವದ್ಗೀತೆಯು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಭಗವದ್ಗೀತೆಯು ಯಾವುದೇ ಒಂದು ಜಾತಿ, ಮತ ಹಾಗೂ ಪಂತಕ್ಕೆ ಸೀಮಿತವಾಗದೆ ಇಡೀ ಮಾನವ ಕುಲಕ್ಕೆ ಶ್ರೇಷ್ಠ ಸಂದೇಶ ನೀಡಿದೆ ಎಂದರು.
ವಿಭಾಗದ ಮುಖ್ಯಸ್ಥೆ ಡಾ. ರಜನಿ ಎಚ್, ಡಾ. ಜ್ಯೋತಿ ಗೋಕಾವಿ, ಡಾ. ಗೀತಾ ಕುಮಶೀಕರ, ಡಾ. ಅಂಜನ ಮಠದ, ಡಾ. ಅನ್ನಪೂರ್ಣ ಹೆಗಡೆ, ಗುರುಪ್ರಸಾದ ಹೆಗಡೆ ಇದ್ದರು. ಡಾ. ಪ್ರಕಾಶ ಹೆಗಡೆ ಪರಿಚಯಿಸಿದರು. ಡಾ. ಚಂದ್ರು ಲಮಾಣಿ ವಂದಿಸಿದರು. ಶ್ರೀಗೌರಿ ನಿರೂಪಿಸಿದರು.