ಸಾರಾಂಶ
ಜಿಲ್ಲಾ ಮಟ್ಟದ ೨ನೆಯ ಚುಟುಕು ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಕೊಪ್ಪಳ
ಯುವ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಚುಟುಕು ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ಕೃಷ್ಟ ಸಾಹಿತ್ಯ ಕೃತಿ ಪ್ರಕಟಿಸಲು ಮುಂದಾಗಬೇಕೆಂದು ಗಜಲ್ ಕವಯತ್ರಿ ಅರುಣಾ ನರೇಂದ್ರ ಪಾಟೀಲ್ ಸಲಹೆ ನೀಡಿದರು.ನಗರದ ಕಿನ್ನಾಳ ರಸ್ತೆಯ ಸೇಂಟ್ ಪಾಲ್ಸ್ ಪದವಿ ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ೨ನೆಯ ಚುಟುಕು ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಿನ ಅನೇಕ ಕವಿಗಳು ಚುಟುಕು ಸಾಹಿತ್ಯ ರಚನೆಯಲ್ಲಿ ತೊಡಗಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ದಿನಕರ ದೇಸಾಯಿ, ಸಿ.ಪಿ.ಕೆ, ಚಂಪಾ, ಎಚ್. ದುಂಡಿರಾಜ್, ಕೊಪ್ಪಳದಲ್ಲಿ ಶಿ.ಕಾ. ಬಡಿಗೇರ, ಅಲ್ಲಮಪ್ರಭು ಬೆಟ್ಟದೂರು, ಶಿವಪ್ರಸಾದ್ ಹಾದಿಮನಿ ಮುಂತಾದವರು ಚುಟುಕು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ವಕೀಲ ಪ್ರಕಾಶ್ ಹಳ್ಳಿಗುಡಿ ವಿಶೇಷ ಉಪನ್ಯಾಸ ನೀಡಿ, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಓದುವ ಅಭಿರುಚಿ ಕಡಿಮೆ ಆಗುತ್ತದೆ. ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿ ಮತ್ತು ದೇಸಾಯಿ ಅವರ ವ್ಯಕ್ತಿತ್ವದ ಬಗ್ಗೆ ವರ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎ.ಪಿ. ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ತುಕ್ಕು ಹಿಡಿದಿದ್ದ ಚುಟುಕು ಸಾಹಿತ್ಯ ಚಟುವಟಿಕೆಗಳಿಗೆ ಈಗ ಹೊಸ ಪದಾಧಿಕಾರಿಗಳು ಜೀವ ತುಂಬಿದ್ದಾರೆ, ಯುವ ಸಾಹಿತಿಗಳು ಒಂದುಗೂಡಿ ನಿರಂತರ ಸಾಹಿತ್ಯಿಕ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕವಿಯತ್ರಿ,ಶಾರದಾ ಶ್ರಾವಣ ಸಿಂಗ್, ರಜಪೂತ, , ಅಕ್ಕಮಹಾದೇವಿ ಅಂಗಡಿ, ಶ್ವೇತಾ ಜೋಶಿ, ರವಿ ಹಿರೇಮನಿ, ಪ್ರದೀಪ ಹದ್ದಣ್ಣವರ್, ರಮೇಶ್, ಶಿವಪ್ರಸಾದ್ ಹಾದಿಮನಿ, ಬಸವರಾಜ ಸಂಕನಗೌಡ್ರು, ಮುತ್ತುರಾಜ್ ಅಂಗಡಿ ಮೊದಲಾದವರು ಉತ್ತಮ ಚುಟುಕು ವಾಚನ ಮಾಡಿದರು, ನಂತರ ಕವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ನಿವೃತ್ತ ಉಪನ್ಯಾಸಕ ಎಸ್.ಬಿ. ಬೀಳಗಿಮಠ, ಡಾ. ನರಸಿಂಹ ಗುಂಜಹಳ್ಳಿ, ಅಮೀನ್ ಸಾಹೇಬ್, ನಾಗರಾಜ್, ಸಂಗೀತಾ, ಮನು ಪ್ರಿಯಾ, ಇತರರು ಉಪಸ್ಥಿತರಿದ್ದರು. ಪೂಜಾ ಗಂಟೆ ಪ್ರಾರ್ಥಿಸಿದರು. ಶಿವಪ್ರಸಾದ್ ಹಾದಿಮನಿ ಸ್ವಾಗತಿಸಿದರು. ಡಾ. ಮಹಾಂತೇಶ್ ನೆಲಾಗಣಿ ನಿರೂಪಿಸಿದರು.