ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಒಳಮೀಸಲಾತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿ ಪಡೆದು 3 ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದವಪ್ಪ ಭರವಸೆ ನೀಡಿದರು.ಒಳಮೀಸಲಾತಿಗೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಮಾಲಿನಿ ಸಿಟಿಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೊಳಿಸಲು ಸಚಿವ ಸಂಪುಟ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಒಕ್ಕೊರಲ ಬೆಂಬಲವೂ ಸಿಕ್ಕಿದೆ. ಒಳಮೀಸಲಾತಿ ಜಾರಿ ಮಾಡೋದು ನೂರಕ್ಕೆ ನೂರರಷ್ಟು ಗ್ಯಾರಂಟಿ, ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಆತುರವಾಗಿ ಜಾರಿಗೊಳಿಸಿದರೆ ಯಾರಾದರೂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಇಷ್ಟು ದಿನಗಳ ಹೋರಾಟ ವ್ಯರ್ಥ ಆಗಬಾರದು ಎಂಬ ಉದ್ದೇಶದಿಂದ ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಿ ವೈಜ್ಞಾನಿಕ ಅಧ್ಯಯನ ಮಾಡಿ, ಅಂಕಿ-ಅಂಶಗಳ್ನು ಕಲೆಹಾಕಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಹನೆ ಇದ್ದಷ್ಟು ಹೋರಾಟ ಯಶಸ್ವಿಯಾಗಲಿದೆ. ನಿಮ್ಮ ಶಕ್ತಿ ಏನೆಂಬುವುದು ಸರ್ಕಾರಕ್ಕೆ ಗೊತ್ತಿದೆ. ಸರ್ಕಾರ ತರುವ ಹಾಗೂ ಉರುಳಿಸುವ ಶಕ್ತಿ ಈ ಸಮಾಜಕ್ಕೆ ಇದೆ ಎಂಬುವುದು ಗೊತ್ತು. ಇಷ್ಟು ವರ್ಷಗಳಿಂದ ಸಹಿಸಿದ್ದೀರಿ, ಕಾಲ ಸನ್ನಿಹಿತವಾಗಿದೆ. ಒಂದಿಷ್ಟು ಇನ್ನೊಂದಿಷ್ಟು ದಿನ ಕಾಯಿರಿ ಎಂದು ಕಿವಿಮಾತು ಹೇಳಿದರು.ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಒಳಮೀಸಲಾತಿ ಜಾರಿ ವಿಷಯದಲ್ಲಿ ಮೊದಲ ಬಾರಿಗೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ನ್ಯಾಯಮೂರ್ತಿ ಸದಾಶಿವ ಆಯೋಗ ಜಾರಿ ಮಾಡಿದರು. ಇದ್ದಾಗ ಕಮಿಟಿ ರಚನೆ ಆಯ್ತು. ನಂತರದಲ್ಲಿ ಆಯಾ ಸರಕಾರಗಳು ಈ ನಿಟ್ಟಿನಲ್ಲಿ ಏನು ಮಾಡಬೇಕು ಅದನ್ನು ಮಾಡಿವೆ. ಕೊನೆಗೆ ಈಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯ ಸರ್ಕಾರಗಳು ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳಬಹುದು ಎಂದು ತೀರ್ಪು ನೀಡಿತು. ನಮ್ಮ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದೆ. ಇದಕ್ಕೆ ಈಗಲೂ ಬದ್ಧರಾಗಿದ್ದೇವೆ. ಹಿಂದೆ ಸರಿಯುವ, ಓಡಿ ಹೋಗುವ ಮಾತೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಆಹಾರ ಮತ್ತು ನಾಗರಿಕ ಸರಬರಾಜ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಮಾಜ ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ಮಾಡಿದ್ದಿವಿ, ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದೀವಿ. ಈಗ ಕಾಲ ಕೂಡಿ ಬಂದಿದೆ. ಸಮಾಜ ಆತುರ ಮಾಡುವುದು ಬೇಡ. ಸಮಿತಿ ವರದಿ ಕೊಟ್ಟ ಬಳಿಕ ಕಾನೂನುಬದ್ಧವಾಗಿ ಒಳಮೀಸಲಾತಿ ನೀಡಲಾಗುವುದು ಇಲ್ಲಿಯವರೆಗೆ ಕಾದಿದ್ದೀವಿ. ಇನ್ನಷ್ಟು ದಿನ ಕಾಯುವುದು ಒಳತು ಎಂದು ಅಭಿಪ್ರಾಯಪಟ್ಟರು.ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಅಸ್ಪೃಶ್ಯರಿಗೆ, ಶೋಷಿತರಲ್ಲಿ ಶೋಷಿತರಿಗೆ, ತುಳಿತಕ್ಕೊಳಗಾದವರನ್ನು ಮೇಲೆತ್ತಲು ಮೀಸಲಾತಿ ನೀಡಿದರು. ಆದರೆ, 1976ರಲ್ಲಿ ನಮ್ಮ ಮೀಸಲಾತಿಯಲ್ಲಿ ಬಲಾಢ್ಯ ಸಮಾಜವನ್ನು ತಂದು ಸೇರಿಸಿದಿರಿ. ಓದಲು ಆಗದ, ಉನ್ನತ ಶಿಕ್ಷಣ ಪಡೆಯಲು ಆಗಲ್ಲ. ಉದ್ಯೋಗ ಪಡೆಯಲು ಆಗಲ್ಲ. ಆ ಸಮಾಜಕ್ಕೆ ಬಲಾಢ್ಯ ಸಮಾಜದೊಂದಿಗೆ ಹೋರಾಡಲು ಬಿಟ್ಟಿರಿ. ಅಂತಹ ಸಮಾಜದೊಂದಿಗೆ ನಾವು ಕಾಂಪಿಟ್ ಮಾಡಲಾಗದೆ ಸಮಾಜ ಮೀಸಲಾತಿಯಿಂದ ವಂಚಿತವಾಯಿತು. 1990 ರವರೆಗೆ ನಮ್ಮ ಸಮಾಜಕ್ಕೆ ಇದರ ಅರಿವು ಆಗಲಿಲ್ಲ. ಅನ್ಯಾಯ ಆಗುತ್ತಿದೆ ಎಂಬ ಅರಿವು ಬರಲಿಲ್ಲ. ಈವರೆಗೂ ಮೀಸಲಾತಿ ಬಗ್ಗೆ ಯಾರಿಗೂ ಪ್ರಶ್ನೆ ಇರಲಿಲ್ಲ. ಆದರೆ, 1976 ಜನಸಂಖ್ಯೆ ಅನುಗುಣವಾಗಿ 15 ಪಸೆಂಟ್ ಕೊಟ್ಟರು. ಸಮಾಜದ ಹಿಂದುಳಿದ ಶೋಷಿತ ವರ್ಗವನ್ನು ಮುಂದೆ ತರಲು ಸರ್ಕಾರಕ್ಕೆ ಸಲಹೆ ಮಾಡಿದ್ದರು. ಸಮಾಜದಲ್ಲಿ ಮುಂದುವರಿದ ಸಮಾಹದ ಜತೆಗೆ ಕಾಂಪಿಟ್ 1976ರಲ್ಲಿ ಬಲಾಢ್ಯರನ್ನು ಸೇರಿಸಿದಿರಿ. ನಮ್ಮ ಜಾತಿಯ ಯುವಕರು ನೂರೊಂದು ಜಾತಿಯ ಜನರೊಂದಿಗೆ ಕಾಂಪಿಟ್ ಮಾಡಲಾಗದೇ ನಮ್ಮ ಸಮಾಜ ಮೀಸಲಾತಿಯಿಂದ ವಂಚಿತವಾಯಿತು. ಒಳಮೀಸಲಾತಿ ಸಂವಿಧಾನ ವಿರೋಧಿ ಅಲ್ಲ. ತಲೆ ಎಣಿಕೆ ಮಾಡಿ ಮೀಸಲಾತಿ ಕೊಡುವುದಲ್ಲ. ಅಸ್ಪೃಶ್ಯರಿಗೆ, ಶೋಷಿತರಲ್ಲಿ ಶೋಷಿತರಿಗೆ ಮೀಸಲಾತಿ ಕೊಡಬೇಕೆಂಬುವುದು ಡಾ.ಅಂಬೇಡ್ಕರ್ ಅವರ ಆಶಯ. ಮೂರು ತಿಂಗಳಲ್ಲಿ ನ್ಯಾಯ ಸಿಗದಿದ್ದರೇ ರಕ್ತ ಕಾರುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಸಿಗಬೇಕೆಂದು ಡಾ.ಅಂಬೇಡ್ಕರ್ ಬಯಸಿದ್ದರು. ನಿಮ್ಮ ಹೋರಾಟ ಈಗ ಅಂತಿಮ ಹಂತಕ್ಕೆ ಬಂದಿದೆ. ಈಗ ಸಾಧ್ಯವಾಗದಿದ್ದರೇ ಇನ್ನೆಂದಿಗೂ ಗುರಿಮುಟ್ಟಲು ಸಾಧ್ಯವಾಗಲ್ಲ. ನಮ್ಮ ಸರ್ಕಾರ ಇದ್ದಾಗ ಒಳಮೀಸಲಾತಿಗೆ ಬೇಕಾದ ಎಲ್ಲ ಕೆಲಸಕ್ಕೆ ಚಾಲನೆ ಕೊಟ್ಟಿದ್ದೇವೆ. ಈಗ ಒಳಮೀಸಲಾತಿ ಕೊಡಬೇಕೆಂದು ಸುಪ್ರೀಂಕೋರ್ಟ್ ಸಹ ಹೇಳಿದೆ, ನಮ್ಮ ಪ್ರಧಾನಿ ಮೋದಿಯವರು ಸಹ ಹೇಳಿದ್ದಾರೆ. ಇನ್ನು ತಡಮಾಡಕೂಡದು. ಬಹುದಿನಗಳ ಹೋರಾಟಕ್ಕೆ ಬೆಲೆ ಬರಬೇಕಾದರೇ ಗಟ್ಟಿ ನಿರ್ಧಾರ ಮಾಡಲೇಬೇಕು. ಆದಷ್ಟು ಶೀಘ್ರ ರಾಜ್ಯ ಸರ್ಕಾರ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಸ್ಪೃಶ್ಯರು, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಜಾರಿಗೆ ತಂದರು. ಆಗ ಎಸ್ಸಿ ಮೀಸಲಾತಿಯಲ್ಲಿ ಕೇವಲ 5-6 ಜಾತಿಗಳಿದ್ದವು. ಈಗ ಇವುಗಳ ಸಂಖ್ಯೆ 101ಕ್ಕೇರಿದೆ. ಅಷ್ಟಾದರೂ ತುಳಿತಕ್ಕೆ ಒಳಗಾದ ಸಮಾಜ ವಿರೋಧ ಮಾಡಲಿಲ್ಲ. ತೀರಾ ಹಿಂದುಳಿದಿರುವ ಸಮಾಜ ಬಲಾಢ್ಯ ಜಾತಿಯವರೊಂದಿಗೆ ಸೆಣಸಾಡಲು ಸಾಧ್ಯವಿಲ್ಲ. ಅದಕ್ಕಾಗಿ ಒಳಮೀಸಲಾತಿಗೆ ಹೋರಾಟ ನಡೆದಿದೆ. ಸರ್ಕಾರ ಕುಂಟುನೆಪ ಹೇಳಬಾರದು. ಹಾಗೆ ಮಾಡಿದರೇ ಮೋಸ ಮಾಡಿದಂತೆ ಆಗುತ್ತದೆ. ಇದಕ್ಕೆ ಬೇರೆಯವರ ತಕಾರರು ಇದ್ದರೆ ಅವರನ್ನು ಬಿಟ್ಟು ಬಿಡಿ. ಸಮಾಜಕ್ಕೆ ಬರಬೇಕಾದ ಶೇ.6 ಮೀಸಲಾತಿ ಕೊಟ್ಟುಬಿಡಿ. ಚುನಾವಣೆ ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಒಳಮೀಸಲಾತಿ ಘೋಷಣೆ ಮಾಡಬೇಕು. ಈಗಾಗಲೇ ಹರ್ಯಾಣದಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಅಲ್ಲಿ ಸಾಧ್ಯವಾದದ್ದು ನಿಮಗೇಕೆ ಸಾಧ್ಯವಾಗಲ್ಲ. ಯಾವುದೇ ಕಮಿಟಿ ರಚನೆಯ ನೆಪ ಬೇಡ. ತಕ್ಷಣ ಒಳಮೀಸಲಾತಿ ಜಾತಿ ಆಗಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಸಿಟಿ ರವಿ ಮಾತನಾಡಿ, ಒಳಮೀಸಲಾತಿ ಜಾರಿಯ ಚಂಡು ಈಗ ಸುಪ್ರೀಂಕೋರ್ಟ್ ಅಥವಾ ಕೇಂದ್ರ ಸರ್ಕಾರದ ಬಳಿ ಇಲ್ಲ. ಚಂಡು ಸಚಿವ ಮಹಾದೇವಪ್ಪ ಅಂಗಳಲ್ಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಳಮೀಸಲಾತಿ ಕಾರಣ ಅಂತ ಬಹಳಷ್ಟು ಜನರು ಹೇಳಿದರು. ಚುನಾವಣೆಯಲ್ಲಿ ಹಿನ್ನಡೆ ಆಗುತ್ತದೆ ಎಂಬುವುದು ಗೊತ್ತಿದ್ದರೂ ನಾವು ರಿಸ್ಕ್ ತೆಗೆದುಕೊಂಡು ಸಮಾಜಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದೇವು. ನಮ್ಮ ಸರ್ಕಾರ ಯಾವ ಸಮಾಜಕ್ಕೂ ಮೋಸ ಮಾಡಲಿಲ್ಲ. ಮೀಸಲಾತಿ ಎಷ್ಟು ಅವಶ್ಯವೋ ಒಳಮೀಸಲಾತಿಯೂ ಅಷ್ಟೇ ಅವಶ್ಯಕ. ಇನ್ನೂ ವಿಳಂಬ ಮಾಡಿದರೆ ಜನಾಕ್ರೋಶ ಕಟ್ಟೆ ಒಡೆಯುತ್ತೆ. ಅದು ಅಸಗಬಾರದೆಂದರೆ ಅಧಿವೇಶನದಲ್ಲಿ ಒಳಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಅರವಿಂದ ಬೆಲ್ಲದ ಮಾತನಾಡಿ, 4000 ವರ್ಷದಿಂದ ಮೇಲ್ವರ್ಗದವರು ವಿಶೇಷ ಅನುಕೂಲತೆ ಪಡೆಯುತ್ತಿದ್ದರು. 70 ವರ್ಷದಿಂದ ಕೆಲವೇ ಕೆಲ ಜಾತಿಗಳು ಮೀಸಲಾತಿ ಲಾಭ ಪಡೆದುಕೊಳ್ಳುತ್ತಿವೆ. ಸರ್ಕಾರ ರಚನೆ ಆಗಿ 18 ತಿಂಗಳಾದರೂ ಕೊಟ್ಟ ಮಾತು ಈಡೇರಿಸಿಲ್ಲ. ಯಾವುದೇ ಆಯೋಗ ರಚನೆಯ ಅವಶ್ಯಕತೆ ಇಲ್ಲ. ಈಗಾಗಲೇ ಅನೇಕ ನೇಮಕಾತಿಗಳಿಗೆ ನೋಟಿಫಿಕೇಶನ್ ಆಗಿದೆ. ಒಳಮೀಸಲಾತಿ ಜಾರಿ ಆಗೋವರೆಗೆ ಅವುಗಳಿಗೆ ತಡೆ ನೀಡಬೇಕು. ಈಗಿನ ಅಧಿವೇಶನದಲ್ಲೇ ಒಳಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಸಮಾಜದ ಮುಖಂಡ ಹನುಂತಪ್ಪ ಆಲ್ಕೋಡ ಮಾತನಾಡಿ, 3 ತಿಂಗಳಲ್ಲಿ ಮಾಡಿ 4 ತಿಂಗಳಲ್ಲಿ ಮಾಡಲಿ. ಈ ಅಧಿವೇಶನದಲ್ಲಿ ಘೋಷಣೆ ಮಾಡಲಿ. ಎಲ್ಲ ನೇಮಕಾತಿ ತಡೆಯುವ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.ಮಾದಾರ ಚನ್ನಯ್ಯ ಸ್ವಾಮೀಜಿ, ತುರುವೇಕೆರೆ ಶಾಸಕ ಕೃಷ್ಟಪ್ಪ, ತುಮಕೂರು ಶಾಸಕ ಜ್ಯೋತಿ ಗಣೇಶ ಮಾತನಾಡಿದರು. ಷಡಕ್ಷರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಒಳಮೀಸಲಾತಿ ಪರ ಬಿಜೆಪಿ ಹೋರಾಟ: ವಿಜಯೇಂದ್ರಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಭಾರತೀಯತ ಜನತಾ ಪಕ್ಷ ಯಾವತ್ತಿಗೂ ಸಹ ನಿಮ್ಮ ಸಮಾಜದ ಪರ ಇದೆ. ರಾಜಕಾರಣ ಬೇರೆ ಸಮಾಜಕ್ಕೆ ನ್ಯಾಯ ಕೊಡಿಸುವುದು ಬೇರೆ. ಸದನದ ಒಳಗೆ ಮತ್ತು ಹೊರಗೆ ಈ ಸಮಾಜದ ಪರ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ ಎಂದು ಅಭಯ ನೀಡಿದರು.ಕಳೆದ 30 ವರ್ಷಗಳಿಂದ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿಕೊಂಡು ಬರಲಾಗುತ್ತಿದೆ. ನಾವೂ ಸಹ ಇತರ ಸಮಾಜಗಳೊಂದಿಗೆ ಗುರುತಿಸಿಕೊಳ್ಳಬೇಕೆಂಬ ಆಶಯ ಈ ಸಮಾಜಕ್ಕಿದೆ. ಅಣ್ಣ ಬಸವಣ್ಣನವರು ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಹಿಂದಿನ ಬಿಜೆಪಿ ಸರ್ಕಾರ ಒಳಮೀಸಲಾತಿಗೆ ಶಿಫಾರಸ್ ಮಾಡಿ ಕೇಂದ್ರಕ್ಕೆ ಕಳಿಸಿದರೂ ಸಹ ಅಪಪ್ರಚಾರ ಮಾಡುವ ಕೆಲಸ ಮಾಡಲಾಯಿತು. ಕೋಲಿ, ಬಂಜಾರರಿಗೆ ಅನ್ಯಾಯ ಮಾಡುತ್ತಿದ್ದೇವೆ ಎಂದು ಅಪಪ್ರಚಾರ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಆಗ ಮಾಡಲಾಯಿತು. ಈ ವಿಷಯದಲ್ಲಿ ರಾಜಕಾರಣಿಗಳು ತಮ್ಮ ಸ್ವಾರ್ಥ, ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾದರೇ ಹೊರತು ದಮನಿತ ಸಮಾಜದ ಧ್ವನಿಯಾಗಲಿಲ್ಲ ಎಂದು ದೂರಿದರು.
ಸುಪ್ರೀಂಕೋರ್ಟ್ ಒಳಮೀಸಲಾತಿ ಅಧಿಕಾರ ರಾಜ್ಯಕ್ಕೆ ನೀಡಿದ ಬಳಿಕ ದಕ್ಷಿಣ ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳು ಮಾತ್ರ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿವೆ.-ಎಚ್.ಸಿ.ಮಹಾದವಪ್ಪ,
ಸಮಾಜ ಕಲ್ಯಾಣ ಇಲಾಖೆ ಸಚಿವರು.ಒಳಮೀಸಲಾತಿ ಜಾರಿಗೆ ಎಲ್ಲ ಸಿದ್ಧತೆ ನಡೆದಿದೆ. ಸಮಸ್ಯೆ ಇರುವುದು ಕಾಲಮಿತಿಯ ಬಗ್ಗೆ ಮಾತ್ರ. ಸುದೀರ್ಘ ವರ್ಷಗಳ ಹೋರಾಟದ ಫಲ ಈಗ ನಿಮ್ಮ ಮನೆಬಾಗಿಲಿಗೆ ಬಂದಿದೆ. ಇಂತಹ ಹಂತದಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ರಾಜಕೀಯ ಮಾಡೋದು ಬೇಡ. ಎಲ್ಲ ಪಕ್ಷಗಳ ಮುಖಂಡರು ಸೇರಿಕೊಂಡು ಪ್ರಯತ್ನ ಮಾಡೋಣ.-ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವರು.ನಮ್ಮ ಜನರಿಗೆ ನ್ಯಾಯ ಕೊಡಸ್ತೀವಿ. ಇದು ಜಾರಿ ಆಗೋವವರೆಗೆ ಯಾವುದೇ ನೇಮಕಾತಿ ಮಾಡಲ್ಲ ಎಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ. ನಮ್ಮ ಸಮಾಜದ ವಿಷಯದಲ್ಲಿ ಯಾರೂ ರಾಜಕಾರಣ ಮಾಡಲು ಹೋಗಬೇಡಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ತಿಂಗಳಲ್ಲಿ ನೂರಕ್ಕ ನೂರರಷ್ಟು ಒಳಮೀಸಲಾತಿ ಜಾರಿಗೆ ತಂದೇ ತರುತ್ತೇವೆ.- ಆರ್.ಬಿ. ತಿಮ್ಮಾಪೂರ,
ಅಬಕಾರಿ ಸಚಿವರು.ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿಗೆ ಸ್ಪಷ್ಟ ನಿರ್ದೇಶನ ನೀಡಿದರೂ ಸಹ ರಾಜ್ಯ ಸರ್ಕಾರ ನ್ಯಾಯಮೂರ್ತಿ ಜಗಮೋಹನ್ ದಾಸ್ ನೇತೃತ್ವದ ಕಮಿಟಿ ರಚನೆ ಮಾಡಿದೆ. ಆದರೆ, ಇದಕ್ಕೆ ಕಚೇರಿ ನೀಡಿಲ್ಲ, ವಾಹನ ನೀಡಿಲ್ಲ. ಇದನ್ನೆಲ್ಲ ನೋಡಿದರೇ ಸಮಾಜಕ್ಕೆ ನ್ಯಾಯ ಒದಗಿಸುವ ಮನಸ್ಥಿತಿಯಲ್ಲಿ ಇಲ್ಲ ಎಂಬ ಸಂಶಯ ಮೂಡಿಸುತ್ತಿದೆ.-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು.