ಪರಶಿವಮೂರ್ತಿ ಮಾಟಲದಿನ್ನಿಕುಷ್ಟಗಿ

ಸಮಯ ಬದಲಾದರೂ ನೌಕರರು ಬದಲಾಗಿಲ್ಲ ಎನ್ನುವುದಕ್ಕೆ ಪಟ್ಟಣದ ತಹಸೀಲ್ದಾರ ಕಾರ್ಯಾಲಯ ಸಾಕ್ಷಿಯಾಗಿದೆ.

ಹೌದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಳವಾಗುತ್ತಿರುವ ಕಾರಣ ಸರ್ಕಾರ ಕಚೇರಿಯ ಸಮಯ ಬದಲಾವಣೆ ಮಾಡಿ ಏ. 1ರಿಂದ ಆದೇಶ ಜಾರಿಗೆ ಮಾಡಿದ್ದರೂ ಕೆಲವು ನೌಕರರು ಮಾತ್ರ ನಿಗದಿತ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ತಾಲೂಕಾಡಳಿತ ಕಚೇರಿಯಲ್ಲಿ ನೌಕರರು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಕಾಯ್ದು ಸುಸ್ತಾದ ಜನರು: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ರೇಷನ್ ಕಾರ್ಡ್‌, ಚುನಾವಣಾ ವಿಭಾಗ, ಆಧಾರ್‌ ಕಾರ್ಡ್‌, ಮಾಸಾಶನ ಪ್ರಮಾಣಪತ್ರ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೇ ಆಫೀಸ್ ಸೇರಿದಂತೆ ಹತ್ತಾರು ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಬಿಸಿಲಿನ ತಾಪ ಏರುವಷ್ಟರಲ್ಲಿ ಕೆಲಸ ಮುಗಿಸಿಕೊಂಡು ಹೋಗಬೇಕು ಎನ್ನುವ ಗುರಿ ಇಟ್ಟುಕೊಂಡು ಬೇಗನೆ ಬರುತ್ತಿದ್ದಾರೆ. ತಾಸುಗಟ್ಟಲೆ ಕಾಯ್ದರೂ ನೌಕರರ ದರ್ಶನವಾಗುತ್ತಿಲ್ಲ. ಹೀಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ.

ಅಧಿಕಾರಿಗಳೇ ಲೇಟ್‌: ಬಿಸಿಲಿನ ತಾಪಮಾನದ ಸಲುವಾಗಿ ಕಚೇರಿಯ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೂ ನಿಗದಿ ಮಾಡಲಾಗಿದೆ. ಆದರೆ ನೌಕರರು 9 ಗಂಟೆ ನಂತರವೇ ಬರುತ್ತಿದ್ದಾರೆ. ಅಧಿಕಾರಿಗಳಂತೂ ಇ್ನೂ ಲೇಟ್‌. ಆದರೆ ಮುಕ್ತಾಯದ ಸಮಯ ಮಾತ್ರ ಸರಿಯಾಗಿ ಮಧ್ಯಾಹ್ನ 1.30!


ತಹಸೀಲ್ದಾರ ಕಾರ್ಯಾಲಯದಲ್ಲಿ ಕೆಲವು ನೌಕರರು ಸರಿಯಾದ ಸಮಯಕ್ಕೆ ಆಗಮಿಸುತ್ತಿಲ್ಲ, 8 ಗಂಟೆ 40 ನಿಮಿಷಕ್ಕೆ ಕಾರ್ಯಾಲಯಕ್ಕೆ ಬಂದರೂ ಯಾರೊಬ್ಬರು ಇರಲಿಲ್ಲ, ಕುರ್ಚಿಯು ಖಾಲಿ ಖಾಲಿಯಾಗಿ ಕಂಡು ಬಂದಿದ್ದು, ಸಮಯಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶನಿವಾರ ಬೆಳಗ್ಗೆ 8 ಗಂಟೆಗೆ ಕೆಲಸದ ನಿಮಿತ್ತ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಹೋಗಿದ್ದು, ಸಮಯ 9 ಗಂಟೆಯಾದರೂ ಕೆಲವು ನೌಕರರು ಸಮಯಕ್ಕೆ ಸರಿಯಾಗಿ ಆಗಮಿಸಿಲ್ಲ. ಸಮಯಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಷ್ಟಗಿ ನಿವಾಸಿ ಮುತ್ತುರಾಜ ಕಟ್ಟಿಮನಿ ತಿಳಿಸಿದ್ದಾರೆ.