ತಾಲೂಕಿನ ಜಾಲಿ ಗ್ರಾಮದ ತಲಗೇರಿಯ ವಿವೇಕಾನಂದ ನಗರದಲ್ಲಿ ಶನಿವಾರ ಬೆಳಗಿನ ಜಾವ ಗೋ ಕಳ್ಳರ ಅಟ್ಟಹಾಸಕ್ಕೆ ಸಾರ್ವಜನಿಕರೇ ತಡೆ ಒಡ್ಡಿದ್ದು, ಜಾನುವಾರು ಸಹಿತ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕಾರು, ಬೈಕ್ ಬಿಟ್ಟು ಓಡಿಹೋದ ಗೋಕಳ್ಳರು: ಘಟನೆ ಬಗ್ಗೆ ತೀವ್ರ ಆಕ್ರೋಶ
ಕನ್ನಡಪ್ರಭ ವಾರ್ತೆ ಭಟ್ಕಳತಾಲೂಕಿನ ಜಾಲಿ ಗ್ರಾಮದ ತಲಗೇರಿಯ ವಿವೇಕಾನಂದ ನಗರದಲ್ಲಿ ಶನಿವಾರ ಬೆಳಗಿನ ಜಾವ ಗೋ ಕಳ್ಳರ ಅಟ್ಟಹಾಸಕ್ಕೆ ಸಾರ್ವಜನಿಕರೇ ತಡೆ ಒಡ್ಡಿದ್ದು, ಜಾನುವಾರು ಸಹಿತ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಗೋಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಏ. ೪ರಂದು ಬೆಳಗಿನ ಜಾವ ೩.೪೫ರ ಸುಮಾರಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಗೋವನ್ನು ಹಿಂಸಾತ್ಮಕ ರೀತಿಯಲ್ಲಿ ಹಾಕಿ ಕಾಲು ಕಟ್ಟಿ ಹಗ್ಗವನ್ನು ಕುತ್ತಿಗೆಗೆ ಬಿಗಿದು ಇನ್ನೇನು ಕಾರು ಹೊರಡಬೇಕೆನ್ನುವಷ್ಟರಲ್ಲಿ ಗೋವುಗಳು ಕೂಗಿಕೊಂಡಿದ್ದು, ಗ್ರಾಮಸ್ಥರಿಗೆ ಕೇಳಿಸಿದೆ. ಬಂದು ನೋಡುವಷ್ಟರಲ್ಲಿ ಕಾರು ಬಿಟ್ಟು ಗೋಕಳ್ಳರು ಪರಾರಿಯಾಗಿದ್ದಾರೆ. ಗ್ರಾಮಸ್ಥರು ಒಟ್ಟಾಗಿ ಗೋವುಕಳ್ಳರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರು. ಆದರೆ ಗೋಕಳ್ಳರು ಪಕ್ಕದ ಅರಣ್ಯ ಪ್ರದೇಶದಲ್ಲಿ ಅವಿತುಕೊಂಡು, ಇನ್ನೊಂದು ಗ್ಯಾಂಗ್ ಕರೆಸಿಕೊಂಡು ಪರಾರಿಯಾಗುವ ಹಂತದಲ್ಲಿದ್ದರು. ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಗೋ ಕಳ್ಳರ ತಂಡ ಕಾರು ಹಾಗೂ ತಾವು ತಂದಿದ್ದ ಬೈಕ್ ಬಿಟ್ಟು ಪರಾರಿಯಾಗಿದೆ.ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನ ಒಳಗೊಂದು ನಂಬರ್ ಪ್ಲೇಟ್ ಪತ್ತೆಯಾಗಿದೆ. ಇದು ನಿರಂತರವಾಗಿ ಗೋವು ಕಳವು ಮಾಡುವ ಗ್ಯಾಂಗ್‌ನ ಕೃತ್ಯ ಎನ್ನುವುದು ಸಾಬೀತಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗೋವುಗಳನ್ನು ಈ ರೀತಿಯಾಗಿ ಕದ್ದೊಯ್ದು ಹತ್ಯೆ ಮಾಡುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಗೋಕಳ್ಳರಿಗೆ ಕಠಿಣ ಶಿಕ್ಷೆಯಾಗಬೇಕು, ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿ ಇಂತಹ ಕೃತ್ಯ ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಗೋಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.