ಮಂಗಳೂರು: ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಹಲವು ಉಪಯುಕ್ತ ಯೋಜನೆಗಳನ್ನು ಆರಂಭಿಸಿದ್ದರೂ, ಅರಿವಿನ ಕೊರತೆಯಿಂದಾಗಿ ಅನೇಕರು ಯೋಜನೆಗಳಿಗೆ ಅರ್ಜಿ ಸಲ್ಲಿಸುತ್ತಿಲ್ಲ. ಬ್ರಾಹ್ಮಣರು ಯೋಜನೆಯ ಉಪಯೋಗ ಪಡೆಯಲು ಮುಂದಾಗಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ.ಎಂ. ಮಾಲತೇಶ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು 2025ರ ಸೆಪ್ಟಂಬರ್‌ನಿಂದ ಕಾರ್ಮಿಕ ಇಲಾಖೆ ಮೂಲಕ ಅರ್ಚಕರು, ಪುರೋಹಿತರು, ಪ್ರಾಥಮಿಕ ಶಾಲಾ ಶಿಕ್ಷಕರು (ಮನೆ ಪಾಠ ಮಾಡುವವರು), ಮುದ್ರಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಬೇಕರಿ ಮತ್ತು ಅಡಕೆ ಕೆಲಸ ಮಾಡುವವರು, ಕರಕುಶಲ ಕೆಲಸಗಾರರು, ಭೂರಹಿತ ಕೃಷಿ ಕಾರ್ಮಿಕರನ್ನು ಅಸಂಘಟಿತ ವರ್ಗಕ್ಕೆ ಸೇರಿಸಿರುವುದರಿಂದ ವಿಪ್ರ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ. ಈ ಕೆಲಸ ಮಾಡುವವರು ಕಾರ್ಮಿಕ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಶಿವಮೊಗ್ಗದಲ್ಲಿ 250 ಮಂದಿ ಅರ್ಹ ಫಲಾನುವಿಗಳನ್ನು ಮಂಡಳಿ ಮೂಲಕ ನೋಂದಣಿ ಮಾಡಲಾಗಿದ್ದು, ಮಂಗಳೂರಿನಲ್ಲಿ ನೋಂದಣಿಯಾಗಿರುವ 100 ಮಂದಿಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರ್ಡುಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಾದ್ಯಂತ ಈ ಯೋಜನೆಯಡಿ ಇನ್ನಷ್ಟು ಮಂದಿಯಿಂದ ಅರ್ಜಿ ಸ್ವೀಕರಿಸಲಾಗುವುದು. ಈ ಕಾರ್ಡ್‌ ಮೂಲಕ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಾಗುವ ಸೌಲಭ್ಯಗಳು ಬ್ರಾಹ್ಮಣ ಸಮುದಾಯಕ್ಕೆ ಸಿಗಲಿವೆ ಎಂದವರು ಹೇಳಿದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂದೀಪನಿ ಶಿಷ್ಯ ವೇತನ, ವಿಪ್ರ ಸ್ವ ಉದ್ಯಮ ನೇರ ಸಾಲ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ, ಆಚಾರ್ಯತ್ರಯರ ಜಯಂತಿ ಆಚರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಧಾರ್ಮಿಕ ದತ್ತಿ ಇಲಾಖೆ ಮೂಲಕ ಪದವಿ ಪೂರ್ವ ಶಿಕ್ಷಣ (ಪಿಯುಸಿ) ಹಾಗೂ ಐಟಿಐ/ಜೆಒಸಿ, ಡಿಪ್ಲೊಮಾ ಶಿಕ್ಷಣಕ್ಕಾಗಿ ತಲಾ 5,000 ರು., ಪದವಿ ಶಿಕ್ಷಣಕ್ಕಾಗಿ 7000 ರು., ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ 15,000 ರು., ಇತರ ವೈದ್ಯಕೀಯ ಕೋಸ್‌ಗಳಿಗೆ ಹಾಗೂ ತಾಂತ್ರಿಕ ಶಿಕ್ಷಣಕ್ಕೆ 25,000 ರು., ವೈದ್ಯಕೀಯ ಅಥವಾ ಡೆಂಟಲ್‌ ಶಿಕ್ಷಣಕ್ಕಾಗಿ 50,000 ರು., ವಿದೇಶ ವ್ಯಾಸಂಗಕ್ಕಾಗಿ 1 ಲಕ್ಷ ರು. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಮಾಲತೇಶ ತಿಳಿಸಿದರು.ವಿದ್ಯಾರ್ಥಿಗಳಿಗೆ (ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಶಿಕ್ಷಣಕ್ಕಾಗಿ ಸರ್ಕಾರಿ ಕೋಟದಡಿ ಸೀಟು ಪಡೆದವರಿಗೆ) ಹಾಗೂ ಹೊಸ ಉದ್ಯಮ ಆರಂಭಿಸುವ ಜನತೆಗೆ ವಿಪ್ರ ಸ್ವಉದ್ಯಮ ನೇರ ಸಾಲ ಯೋಜನೆಯಡಿ 2025-26ನೆ ಸಾಲಿನಲ್ಲಿ 1333 ಅರ್ಜಿಗಳು ಬಂದಿದ್ದು, 800 ಅರ್ಜಿಗಳಿಗ ನೇರ ವಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ 2 ಲಕ್ಷ ರು. ಜಮಾ ಮಾಡಲಾಗಿದೆ. ಸಾಲ ಪಡೆದ ಫಲಾನುಭವಿಗಳಿಗೆ ಪ್ರಥಮ ಎರಡು ತಿಂಗಳು ಯಾವುದೇ ಬಡ್ಡಿ ಅಥವಾ ಕಂತು ಇರುವುದಿಲ್ಲ. ಅಲ್ಲದೆ 40 ಸಾವಿರ ರು. ಸಬ್ಸಿಡಿ ರೂಪದಲ್ಲಿ ಫಲಾನುಭವಿಗಳಿಗೆ ದೊರೆಯುತ್ತದೆ. ಮೂರನೇ ತಿಂಗಳಿನಿಂದ 1,60,000 ರು.ಗೆ ಶೇ. 4ರ ಬಡ್ಡಿದರದಲ್ಲಿ 34 ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾಂದೀಪನಿ ಶಿಷ್ಯ ವೇತನದಡಿ 2026-27ನೇ ಸಾಲಿನಲ್ಲಿ 3,376 ವಿದ್ಯಾರ್ಥಿಗಳು ತಲಾ 15000 ರು.ನಂತೆ ವಿದ್ಯಾರ್ಥಿ ವೇತನ ಪಡೆದಿದ್ದು, ಇದಕ್ಕಾಗಿ 5.05 ಕೋಟಿ ರು. ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ವಿಶ್ವಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಡಿ 159 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದು, ಇದಕ್ಕಾಗಿ 1.5 ಕೋಟಿ ರು.ಗಳಷ್ಟು ಹಣ ವಿದ್ಯಾರ್ಥಿಗಳ ಖಾತೆಗೆ ಸಂದಾಯವಾಗಿದೆ. ಈ ಮೂಲಕ ಮಂಡಳಿಯಿಂದ 2025-26 ಹಾಗೂ 2026-27ನೇ ಸಾಲಿನಲ್ಲಿ ಈವರೆಗೆ ಒಟ್ಟು 34 ಕೋಟಿ ರು. ವ್ಯಯ ಮಾಡಲಾಗಿದೆ ಎಂದು ಅವರು ವಿವರ ನೀಡಿದರು.

ಮುಖಂಡರಾದ ನಮಿತಾ ಡಿ. ರಾವ್‌, ಶ್ರೀಧರ ಹೊಳ್ಳ, ರಾಘವೇಂದ್ರ ರಾವ್‌, ಎಚ್‌. ನಾಗೇಶ್‌ ಇದ್ದರು.