ಉದ್ಯೋಗಕ್ಕೆ ವಿದ್ಯೆ ಜತೆಗೆ ಕೌಶಲ್ಯವೂ ಬೇಕು

| Published : Nov 11 2025, 02:45 AM IST

ಸಾರಾಂಶ

ವಿದ್ಯುತ್ ಉತ್ಪಾದನೆಯಲ್ಲಿ ಸೋಲಾರ ಎನರ್ಜಿ ಮುಖ್ಯ ಪಾತ್ರ ವಹಿಸುತ್ತಿದೆ. ಕೈಗಾರಿಕೆಗಳು, ಮನೆ, ಶಾಲಾ-ಕಾಲೇಜುಗಳ ಚಾವಣಿ ಮೇಲೆ ಸೋಲಾರ ಪ್ಯಾನಲ್‌ ಅಳವಡಿಸಿ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೂ ಮರಳಿ ಮಾರಾಟ ಮಾಡುತ್ತಿದ್ದಾರೆ.

ಧಾರವಾಡ:

ಕೌಶಲ್ಯಾಧಾರಿತ ತರಬೇತಿಗಳು ನಿರುದ್ಯೋಗಿ ಯುವಕರ ಪಾಲಿಗೆ ವರ. ಕೇವಲ ವಿದ್ಯಾರ್ಜನೆಯಿಂದ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಜನೆಯ ಜತೆ ಜತೆಗೆ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಯಿಂದ ಸ್ವ-ಉದ್ಯೋಗ ಪ್ರಾರಂಭಿಸಬಹುದು ಎಂದು ಜೆಎಸ್‌ಎಸ್‌ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ನೆನಪಿಗಾಗಿ ಜೆಎಸ್‌ಎಸ್ ಕೌಶಲ್ಯ ಐಟಿಐ, ಧಾರವಾಡ ಜೈನ ಮಿಲನ ಹಾಗೂ ಅರ್ಬ ಸೋಲಾರ ಎನರ್ಜಿ ಜಂಟಿಯಾಗಿ ಆಯೋಜಿಸಿದ್ದ 15 ದಿನಗಳ ಉಚಿತ ಸೋಲಾರ ಟೆಕ್ನಿಶಿಯನ್ ತರಬೇತಿ ಉದ್ಘಾಟಿಸಿದ ಅವರು, ವಿದ್ಯುತ್ ಉತ್ಪಾದನೆಯಲ್ಲಿ ಸೋಲಾರ ಎನರ್ಜಿ ಮುಖ್ಯ ಪಾತ್ರ ವಹಿಸುತ್ತಿದೆ. ಕೈಗಾರಿಕೆಗಳು, ಮನೆ, ಶಾಲಾ-ಕಾಲೇಜುಗಳ ಚಾವಣಿ ಮೇಲೆ ಸೋಲಾರ ಪ್ಯಾನಲ್‌ ಅಳವಡಿಸಿ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೂ ಮರಳಿ ಮಾರಾಟ ಮಾಡುತ್ತಿದ್ದಾರೆ ಎಂದರು.

ಜೆಎಸ್ಸೆಸ್‌ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ಮೊದಲು ಸೋಲಾರ ಶಕ್ತಿಯ ಬಳಕೆಯನ್ನು ಕೇವಲ ಶ್ರೀಮಂತರಿಗೆ ಮಾತ್ರ ಎಂಬುದು ವಾಡಿಕೆಯಲ್ಲಿ ಇತ್ತು, ಆದರೆ, ಈಗ ಕಾಲ ಬದಲಾಗಿದೆ. ಈಗ ಬಡವರ ಕೈಗೆಟುಕುವ ದರದಲ್ಲೂ ಸೋಲಾರ ಶಕ್ತಿಯ ಮೂಲಗಳು ದೊರೆಯುತ್ತಿವೆ ಹಾಗೂ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ ಎಂದು ಹೇಳಿದರು.

ಅರ್ಬ್ ಸೋಲಾರ ಎನರ್ಜಿಯ ಹರ್ಷಕುಮಾರ ಶೆಟ್ಟಿ ಮಾತನಾಡಿ, ಅರ್ಬ್ ಸೋಲಾರ ಎನರ್ಜಿ ವಿಕಸಿತ ಸೋಲಾರ ಫಲಕಗಳ ತಯಾರಿಕಾ ಮತ್ತು ಅಳವಡಿಕೆ ಮಾಡಿಕೊಡುವಂತಹ ಕಂಪನಿ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಪರ್ಯಾಯ ಇಂಧನ ಹಾಗೂ ಸೌರಶಕ್ತಿ ದೊರಕಬೇಕೆಂಬ ಉದ್ದೇಶ ಹೊಂದಿದೆ ಎಂದರು.

ಜೆಎಸ್‌ಎಸ್‌ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಮಾತನಾಡಿ, ಸೋಲಾರ್ ಟೆಕ್ನೀಶಿಯನ್ ಕೋರ್ಸ್‌ ಡಾ. ಅಜಿತ ಪ್ರಸಾದ ಅವರ ಕನಸಿನ ಕೂಸು. ಸೋಲಾರ ಶಕ್ತಿಯ ನೂತನ ತಂತ್ರಜ್ಞಾನದ ಪರಿಚಯ ಪ್ರತಿಯೊಬ್ಬರಿಗೂ ಆಗಬೇಕಿದೆ ಎಂದರು.

ಸನ್ಮತಿ ಸೇವಾ ಸಮಾಜದ ಉಪಾಧ್ಯಕ್ಷೆ ನಂದಿನಿ ಬಾಗಿ, ಸನ್‌ರೇ ಸೋಲಾರ ಮ್ಯೂಸಿಯಂ ನಿರ್ದೇಶಕ ಮಹೇಶ ವಿ.ಎಸ್‌., ಮಾತನಾಡಿದರು. ಅಶ್ವಿನಿ ದೇಸಾಯಿ ಪ್ರಾರ್ಥಿಸಿದರು, ರಾಹುಲ್ ಉಪಾದ್ಯೆ ವಂದಿಸಿದರು. ರತ್ನಾಕರ ಹೋಳಗಿ ನಿರೂಪಿಸಿದರು, ಜಿನ್ನಪ್ಪ ಕುಂದಗೊಳ, ಮೋಹನಕುಮಾರ ಗೋಗಿ ಇದ್ದರು.