ಸಾರಾಂಶ
ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರು ಉಳಿಸಿ, ಬೇಸಿಗೆ ಬೆಳೆಗೆ ನೀರು ಕೊಡಬೇಕು ಎಂದು ತುಂಗಭದ್ರಾ ರೈತ ಸಂಘದಿಂದ ಮುನಿರಾಬಾದ್‌ನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ ನಾಯ್ಕಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಬಲದಂಡೆ ಮತ್ತು ಎಡದಂಡೆಯ ಎಚ್‌ಎಲ್‌ಸಿ, ಎಲ್‌ಎಲ್‌ಸಿ, ಎಲ್‌ಬಿಎಂಸಿ ಕಾಲುವೆಗಳ ಹಾಗೂ ಆಂಧ್ರಪ್ರದೇಶದ ವ್ಯಾಪ್ತಿಯ ರೈತರ ಜಮೀನುಗಳಿಗೆ ಉತ್ತಮ ಮಳೆಯಾಗಿದೆ. ಮುಂಗಾರು ಬೆಳೆಗಳು ಕಟಾವಿಗೆ ಬಂದಿವೆ. ಆದರೆ ತಾವು ಕಾಲುವೆಗಳಿಗೆ ಹೆಚ್ಚುವರಿ ನೀರನ್ನು ಬಿಟ್ಟು ಕಾಲುವೆಗಳಿಂದ ಮೋರಿಗಳ ಮುಖಾಂತರ ಹಳ್ಳಗಳಿಗೆ ನೀರು ಬಿಡುತ್ತಿದ್ದೀರಿ. ಇದರಿಂದ ಹಳ್ಳಗಳ ವ್ಯಾಪ್ತಿಯಲ್ಲಿ ಬೆಳೆದ ರೈತರ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ದೂರಿದರು.ತುಂಗಭದ್ರಾ ನದಿಗೂ ಹೆಚ್ಚುವರಿ ನೀರು ಬಿಡುತ್ತಿದ್ದೀರಿ. ಈಗಾಗಲೇ ಸುಮಾರು ಒಂದು ತಿಂಗಳಿನಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ ರೈತರು ಬೇಸಿಗೆ ಬೆಳೆಗೆ ನೀರುಬೇಕು ಎಂದು ಸಚಿವರುಗಳಿಗೂ ಹಾಗೂ ಶಾಸಕರುಗಳಿಗೂ ಮನವಿ ಸಲ್ಲಿಸಿ ವಿನಂತಿಸುತ್ತಿದ್ದಾರೆ. ಪರಿಣತ ತಜ್ಞ ಕನ್ನಯ್ಯ ನಾಯ್ಡು ಇವರು ಜಲಾಶಯಕ್ಕೆ ಗೇಟುಗಳ ಅಳವಡಿಕೆಗೂ ಮತ್ತು ಬೇಸಿಗೆ ಬೆಳೆ ಬೆಳೆಯಲು ಸಮಯದ ಅವಕಾಶವಿದೆ ಎಂದು ತಿಳಿಸಿರುತ್ತಾರೆ. ಜಲಾಶಯದ ವ್ಯಾಪ್ತಿಯ ರೈತರು ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಹೆಚ್ಚುವರಿ ಮಳೆಯಿಂದ ಸಾಕಷ್ಟು ನಷ್ಟ ಹೊಂದಿರುವ ಕಾರಣ ಬೇಸಿಗೆ ಬೆಳೆಯ ಕುರಿತು ಆಶಾದಾಯಕರಾಗಿದ್ದಾರೆ. ಯಾವುದೇ ಕಾರಣಕ್ಕೂ ತುಂಗಭದ್ರ ಜಲಾಶಯದ ನೀರನ್ನು ಹೆಚ್ಚುವರಿಯಾಗಿ ಕಾಲುವೆಗಳಿಗೆ ಮತ್ತು ನದಿಗೆ ಬಿಡದೇ ನೀರು ಉಳಿಸಿ ಬೇಸಿಗೆ ಬೆಳೆಗೆ ರೈತರಿಗೆ ನೀರು ಕೊಡಲು ಸಹಕರಿಸಬೇಕು ಎಂದು ಆಗ್ರಹಿಸಿದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮಗೌಡ, ದರೂರ್ ಸಾಗರ ಗೌಡ ಮತ್ತಿತರರಿದ್ದರು.ತುಂಗಭದ್ರ ರೈತ ಸಂಘದಿಂದ ಮುನಿರಾಬಾದ್‌ನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ ನಾಯ್ಕಗೆ ಮನವಿಪತ್ರ ಸಲ್ಲಿಸಲಾಯಿತು.
;Resize=(128,128))
;Resize=(128,128))
;Resize=(128,128))