ಸಾರಾಂಶ
ಕಂಪ್ಲಿ: ನ್ಯಾಯಾಧೀಶ ಗವಾಯಿ ಮೇಲೆ ಶೂ ಎಸೆದ ಘಟನೆಯಲ್ಲಿ ಭಾಗಿಯಾದ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಜೊತೆಗೆ ಸಮಾಜದ ಹಕ್ಕುಗಳ ಸಂರಕ್ಷಣೆ ಮತ್ತು ಅಂಬೇಡ್ಕರ್ ತತ್ವಗಳ ಗೌರವಕ್ಕಾಗಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ ಅವರಿಗೆ ಮನವಿ ಸಲ್ಲಿಸಿದರು.ಸಮಿತಿಯ ಕಲ್ಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕ ಕೆ.ಮೆಹಬೂಬ್ ಮಾತನಾಡಿ, 1950ರ ದಶಕದಲ್ಲೇ ಡಾ.ಬಿ.ಆರ್. ಅಂಬೇಡ್ಕರ್ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭೆಯಂತಹ ಸಂಘಟನೆಗಳು ಸಂವಿಧಾನದ ವಿರೋಧಿ ಚಿಂತನೆಗಳನ್ನು ಹೊಂದಿವೆ ಎಂದು ಎಚ್ಚರಿಸಿದ್ದರು. ಮನುಸ್ಮೃತಿಯನ್ನೇ ಶ್ರೇಷ್ಠವೆಂದು ಬಿಂಬಿಸಿ ಮಹಿಳೆಯರಿಗೆ ಪುರುಷ ಸಮಾನತೆ ನೀಡುವ ಕಾನೂನು ಬಿಲ್‌ನ ಪ್ರತಿಯನ್ನು ಆರ್‌ಎಸ್‌ಎಸ್ ಸುಟ್ಟು ಹಾಕಿತ್ತು. ಇಂತಹ ಸಂಪ್ರದಾಯಪರ ಸಂಘಟನೆಗಳ ಮನೋಭಾವನೆ ಸಮಾಜಕ್ಕೆ ಅಪಾಯಕಾರಿಯಾಗಿದೆ. ಇದೀಗ ಸನಾತನ ಧರ್ಮ ಉಳಿವಿನ ಹೆಸರಿನಲ್ಲಿ ನ್ಯಾಯಾಧೀಶ ಗವಾಯಿ ಮೇಲೆ ಶೂ ಎಸೆದ ಘಟನೆ ಅತಿ ಗಂಭೀರ. ಇಂತಹ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಕಾನೂನು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಿಕ್ಕಾರ. ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಂಸದ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿ, ಅವಮಾನಕಾರಿ ಪದಗಳನ್ನು ಬಳಸಿದ ವ್ಯಕ್ತಿಯ ವಿರುದ್ಧವೂ ಕಠಿಣ ಶಿಕ್ಷೆ ವಿಧಿಸಬೇಕು. ಅಂಬೇಡ್ಕರ್ ಚಿಂತನೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಸರ್ಕಾರದ ನೈತಿಕ ಹೊಣೆಗಾರಿಕೆ ಎಂದರು.ಕಲ್ಬುರ್ಗಿ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಅವರ ಹೆಸರಿಡುವಂತೆ ದಲಿತ ಸಂಘರ್ಷ ಸಮಿತಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಈ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಚಿತ್ತಾಪುರದಲ್ಲಿ ಪಥಸಂಚಲನದ ಹೆಸರಿನಲ್ಲಿ ಸಾಮಾಜಿಕ ಸೌಹಾರ್ದ ಕೆಡಿಸಲು ಯತ್ನಿಸಿದರೆ, ಆರ್‌ಎಸ್‌ಎಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
;Resize=(128,128))
;Resize=(128,128))
;Resize=(128,128))