ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾ ವಕೀಲರ ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳಿದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನದತ್ತ ಸಾಗಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಕ್ಕೊತ್ತಾಯದ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಪುಟ್ಟಸ್ವಾಮಿ, ವಕೀಲರು ದೇಶಾದ್ಯಂತ ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿಕೊಂಡು ಬಂದಿದ್ದು, ವಕೀಲರಿಗೆ ಯಾವುದೇ ಸೂಕ್ತ ಹಾಗೂ ಸಮರ್ಪಕವಾದ ಭದ್ರತೆ ಹಾಗೂ ಕಾನೂನು ಇರುವುದಿಲ್ಲ ಎಂದರು.

ಈಗ ಇರುವ ವಕೀಲರ ದೌರ್ಜನ್ಯ ತಡೆ ಕಾಯ್ದೆ ನಾಮ ಮಾತ್ರ ಕಾಯ್ದೆಯಾಗಿದ್ದು, ಈ ಕಾಯ್ದೆಯಿಂದ ವಕೀಲರಿಗೆ ಅಷ್ಟೊಂದು ಭದ್ರತೆಯೂ ಇಲ್ಲ. ಆರೋಪಿಗಳ ವಿರುದ್ಧ ಬಲವಾದ ರೀತಿಯಲ್ಲಿ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಇರುವುದಿಲ್ಲ. ಈಚೆಗೆ ವಕೀಲರೊಬ್ಬರ ಕತ್ತನ್ನು ಕುಯ್ದು ಕೊಲೆ ಮಾಡಿರುವುದು ಹಾಗೂ ಇನ್ನೊಂದು ಕಡೆ ವಕೀಲರ ವಿರುದ್ಧ ಕೊಲೆ ಪ್ರಯತ್ನ ನಡೆದಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದರು.


ಇದೇರೀತಿ ನಿರಂತರವಾಗಿ ವಕೀಲರ ವಿರುದ್ಧ ಹಲ್ಲೆ ಕೊಲೆ, ಕೊಲೆ ಪ್ರಯತ್ನಇತರೆ ರೀತಿಯಲ್ಲಿ ದೌರ್ಜನ್ಯಗಳು ನಡೆಯತ್ತಿರುವುದರಿಂದ ವಕೀಲರು ನಿರ್ಭಯವಾಗಿ ಕಾರ್ಯ ನಿರ್ವಹಿಸದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ತಾವು ವಕೀಲರ ವಿರುದ್ದ ನಡೆಯುವ ದೌರ್ಜನ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ ವಕೀಲರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ರೀತಿಯಲ್ಲಿ ವಕೀಲರ ದೌರ್ಜನ್ಯ ತಡೆ ಕಾಯ್ದೆಗೆಅವಶ್ಯಕವಾದ ತಿದ್ದುಪಡಿಯನ್ನು ತಂದು ರಾಜ್ಯ ಸರ್ಕಾರವು ಈಗಾಗಲೇ ಮಾಡಿರುವ ವಕೀಲರ ಕಾಯಿದೆಯನ್ನು ಸಂಪೂರ್ಣ ಜಾರಿ ಮಾಡಿ, ಅದನ್ನು ಬಲಪಡಿಸಬೇಕೆಂದು ಆಗ್ರಹಿಸಿದರು

ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಮು, ಜಂಟಿಕಾರ್ಯದರ್ಶಿ ಸಿ.ಸಿ,ರಮೇಶ್, ಮಮತಾ, ಎಂ,ಆರ್.ಸವಿತಾ, ಹಿರಿಯ ವಕೀಲರಾದಚಿನ್ನಸ್ವಾಮಿ, ನಂಜಯ್ಯ, ಪ್ರಸನ್ನಕುಮಾರ್, ಮಂಜು, ನಾಗಾರ್ಜುನ (ಪೃಥ್ವಿ), ಎಸ್.ಪ್ರತಾಪ್, ಜಗದಾಂಬಿಕೆ, ಸೇರಿ ವಕೀಲರು, ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.