ಕನ್ನಡಪ್ರಭ ವಾರ್ತೆ ಸಿಂಧನೂರು

ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ರೈತರ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ನಗರದ ಟಿಎಪಿಸಿಎಂಎಸ್ನ ಆವರಣದಲ್ಲಿ ಗುರುವಾರ ಸಿಂಧನೂರು ತಾಲ್ಲೂಕು ರೈತರ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ‘ಸಿಂಧನೂರು ಮುಂಗಾರು ಕಾರಹುಣ್ಣಿಮೆ ಸಂಭ್ರಮ’ದ ಹಿನ್ನೆಲೆಯಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಕಂಬಳ ಕ್ರೀಡೆಗೆ ಮಹತ್ವ ಸಿಕ್ಕಂತೆ ಕಲ್ಯಾಣ ಕರ್ನಾಟಕ ಭಾಗದ ದೇಶೀಯ ರೈತ ಕ್ರೀಡೆಗಳಾದ ಸಂಗ್ರಾಣಿ ಕಲ್ಲು, ಗುಂಡು ಕಲ್ಲು ಎತ್ತುವ ಸ್ಫರ್ಧೆ ಹಾಗೂ ಎತ್ತುಗಳಿಂದ ಭಾರದ ಕಲ್ಲುಗಳನ್ನು ಎಳೆಯುವ ಸ್ಪರ್ಧೆಗಳಿಗೆ ಹೆಚ್ಚು ಮಹತ್ವ ಸಿಗಬೇಕಿದೆ. ಪ್ರಚಾರದ ಕೊರತೆ ಮತ್ತು ನಿರಾಸಕ್ತಿಯ ಪರಿಣಾಮವಾಗಿ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ಲಭಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಪ್ರಸಕ್ತ ವರ್ಷ ಮುಂಗಾರು ಮಳೆ ಅಭಾವದಿಂದ ರೈತರಲ್ಲಿ ಸಂತಸ ಕಾಣುತ್ತಿಲ್ಲ. ಆದರೂ ಮಲೆನಾಡು ಪ್ರದೇಶದಲ್ಲಿ ಕಳೆದ ಮರ್ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿರುವದು ರೈತರಲ್ಲಿ ಆಶಾಭಾವನೆ ಮೂಡಿದೆ. ಮಳೆ ಬಂದರೆ ಮಾತ್ರ ರೈತರ ಬದುಕು ಹಸನಾಗಲಿದೆ. ಕಳೆದ 25 ವರ್ಷಗಳಿಂದ ಎಪಿಎಂಸಿ ಹಾಗೂ ಟ್ರಸ್ಟ್ ಈ ಕ್ರೀಡೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಚನ್ನನಗೌಡ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಜಿ.ಪಂ.ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಕಾಂಗ್ರೆಸ್ ಮುಖಂಡ ವೀರನಗೌಡ ಬಾದರ್ಲಿ, ವೆಂಕಟರಾವ್‌ ಬಾದರ್ಲಿ, ಛತ್ರಪ್ಪ ಕುರುಕುಂದಿ, ವೀರೇಶ ಯಡಿಯೂರಮಠ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಶರಣಪ್ಪ ರಡ್ಡೇರ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಖಾಜಿ ಮಲಿಕ್, ಎಪಿಎಂಸಿ ಕಾರ್ಯದರ್ಶಿ ಡಾ.ಶಿವಾನಂದ ಕುಂಬಾರ, ಅಮರೇಶ ಬೂತಲದಿನ್ನಿ ಪಾಲ್ಗೊಂಡಿದ್ದರು.


--

9ಕೆಪಿಎಸ್ಎನ್ಡಿ2: ಸಿಂಧನೂರಿನ ಟಿಎಪಿಸಿಎಂಎಸ್ ಆವರಣದಲ್ಲಿ ಜಿಲ್ಲಾ ಮಟ್ಟದ ಕ್ರೀಡೆಗಳನ್ನು ನಡೆಸಲಾಯಿತು.