ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮತ್ತು ಕಾನೂನುಬಾಹಿರವಾಗಿ ಕಂದಾಯ ಇಲಾಖೆ ದಾಖಲೆ ತಿದ್ದುಪಡಿ ಮಾಡಿ ಖಾತೆ ಮಾಡಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಶ್ರವಣೂರು ಗ್ರಾಮಸ್ಥರಾದ ಅನಂತರಾಮಯ್ಯ ಮತ್ತು ಯೋಗೀಶ್ ಮಾತನಾಡಿ, ಶ್ರವಣೂರು ಗ್ರಾಮದ ಸರ್ವೆ ನಂ. ೫೭ರಲ್ಲಿ ೦೧ ಎಕರೆ ೨೭ ಗುಂಟೆ, ಸರ್ವೆ ನಂ. ೫೮ರಲ್ಲಿ ೧೭ ಗುಂಟೆ ಮತ್ತು ೫೯ರಲ್ಲಿ ೨೭ ಎಕರೆ ೧೯ ಗುಂಟೆಯಲ್ಲಿ ಸರ್ಕಾರಿ ಕೆರೆ ಇರುತ್ತದೆ. ಸದರಿ ಸರ್ಕಾರಿ ಕೆರೆ ಶ್ರವಣೂರು ಗ್ರಾಮದ ಸಾರ್ವಜನಿಕ ಆಸ್ತಿ ಆಗಿರುತ್ತದೆ ಮತ್ತು ಅದರ ಪೂರ್ಣಸೌಕರ್ಯ ಮತ್ತು ಉಪಯೋಗ ಅಕ್ಕಪಕ್ಕ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಬಹು ಮುಖ್ಯವಾಗಿರುತ್ತದೆ. ಆದರೆ ಹಳ್ಳಿ ಮೈಸೂರು ಹೋಬಳಿ ಬಂಟರತಳಾಲು ಗ್ರಾಮದ ನಿವಾಸಿ ಬಿ.ಜೆ. ಮಂಜೇಗೌಡ ಇವರು ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿ ಬೆಳೆಯನ್ನು ಹಾಕಿರುತ್ತಾರೆ. ಸರ್ಕಾರಿ ಕೆರೆಯಲ್ಲಿ ನೀರಿನ ಮಟ್ಟವು ತುಂಬಾ ಕಡಿಮೆ ಇದ್ದು, ಗ್ರಾಮಸ್ಥರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತುಂಬಾ ಸಮಸ್ಯೆಯಾಗಿರುತ್ತದೆ ಎಂದರು.
ಜಮೀನನ್ನು ಲಪಟಾಯಿಸುವ ಉದ್ದೇಶದಿಂದ ಮಂಜೇಗೌಡ ಅವರು ಸುಮಾರು ೧೫ ವರ್ಷ ಹಿಂದೆ ಕಾರ್ವನಿರ್ವಹಿಸಿರುವ ಭ್ರಷ್ಟ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳ ಜೊತೆ ಶಾಮೀಲಾಗಿ ಕೈಬರಹ ಪಹಣಿ ಮತ್ತು ೦೫ ಮತ್ತೆ ೦೬ನೇ ಕಂದಾಯ ರಿಜಿಸ್ಟ್ರಾರ್‌ನಲ್ಲಿ ಬಂಟರ ತಳಾಲು ಗ್ರಾಮದ ನಿವಾಸಿ ಬಿ ಜೆ ಮಂಜೇಗೌಡ ತಾತನಾದ ಹೊಂಬಾಳೆ ಗೌಡ ಬಿನ್ ಉರುಗಪ್ಪ (ಪಿತ್ರಾರ್ಜಿತ) ಎಂದು ಕಾನೂನು ಬಾಹಿರ ಮತ್ತು ಅಕ್ರಮವಾಗಿ ಮೂಲ ದಾಖಲಾತಿ ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ ಎಂದು ದೂರಿದರು.ಸರ್ಕಾರಿ ಕೆರೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುತ್ತಾರೆ. ಆದರೆ ಸರ್ವೇ ನಂ: ೫೭,೫೮ & ೫೯ಗಳಿಗೆ ಸಂಬಂಧಿಸಿದಂತೆ ಉಪ-ವಿಭಾಗಾಧಿಕಾರಿಯವರ ನ್ಯಾಯಾಲಯ ಹಾಸನ ಉಪ ವಿಭಾಗ ದಲ್ಲಿ ದಿನಾಂಕ:೨೪-೦೧-೨೦೧೮ ರಂದು ಬಹಿರಂಗ ನ್ಯಾಯಾಲಯದಲ್ಲಿ ಸರ್ಕಾರಿ ಕೆರೆ ಎಂದು ಆದೇಶವನ್ನು ಮಾಡಿರುತ್ತಾರೆ. ಆದರೆ ಸುಳ್ಳು, ದಾಖಲೆ ನೀಡಿರುವ ಬಿಜೆ ಮಂಜೇಗೌಡ ವಿರುದ್ಧ ಇಲ್ಲಿಯವರೆಗೂ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ೨೦೧೮ ರಲ್ಲಿ ಎಸಿ ಕೋರ್ಟ್ ನಲ್ಲಿ ಮಂಜೇಗೌಡರ ಅರ್ಜಿ ವಜಾ ಆಗಿದ್ದು, ಆದರೆ ಮತ್ತೆ ನಕಲಿ ದಾಖಲೆ ಸೃಷ್ಟಿ ಮಾಡಿ ಡಿಸಿ ಕೋರ್ಟ್ ಮೂಲಕ ಭೂಮಿ ಲಪಟಾಯಿಸಲು ಯತ್ನ ಮಾಡಲಾಗಿದೆ. ಒಟ್ಟು ೨ ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಬಗ್ಗೆ ಗ್ರಾಮಸ್ಥರ ಆರೋಪಿಸಿದ್ದು, ತಹಸೀಲ್ದಾರ್, ವಿಎ, ಆರ್‌ಐ ಸ್ಥಳ ಮಹಜರ್‌ನಲ್ಲಿ ವ್ಯತಿರಿಕ್ತ ಹೇಳಿಕೆ ಇದ್ದರೂ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿ ಪಾಲಾಗಿದೆ. ತಹಸಿಲ್ದಾರ್, ವಿಎ, ಆರ್ ಐ ಸ್ಥಳ ಮಹಜರ್ ನಲ್ಲಿ ವ್ಯತಿರಿಕ್ತ ಹೇಳಿಕೆ ಇದ್ದರೂ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿ ಪಾಲಾಗಿದೆ, ಕೆರೆ ಭೂಮಿ ಉಳಿಸಿ ಎಂದು ಗ್ರಾಮಸ್ಥರು ಕೋರಿದರು. ಕೂಡಲೇ ಡಿಸಿ ಕೋರ್ಟ್ ಆದೇಶ ರದ್ದು ಮಾಡುವಂತೆ ಒತ್ತಾಯಿಸಿದ್ದು, ಕಳೆದ ವರ್ಷ ಏಕಾಏಕಿ ಕೆರೆ ಜಾಗ ಉಳುಮೆ ಮಾಡಲು ಬಂದಾಗ ಅಕ್ರಮ ಬಯಲಾಗಿದೆ. ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವಂತೆ ಸರ್ಕಾರಿ ದಾಖಲೆ ತಿದ್ದಿದ್ದಾರೆ, ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಕೆರೆ ಭೂಮಿಯಲ್ಲಿ ಯಾವುದೇ ಕೃಷಿ ಮಾಡದಿರೋದು ಖಾತ್ರಿಯಾಗಿದೆ. ಎಲ್ಲಾ ಸ್ಥಳ ಮಹಜರ್‌ನಲ್ಲಿ ಕೆರೆ ಭೂಮಿ ಎಂಬ ಬಗ್ಗೆ ವರದಿ ಇದೆ, ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಜಮೀನುಗಳನ್ನು ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿರವವರ ಬಗ್ಗೆ ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶ್ರವಣೂರು ಗ್ರಾಮದ ಚಂದ್ರಶೇಖರ್, ಸ್ವಾಮಿ, ಪ್ರಸನ್ನ, ಎಸ್.ಬಿ. ರಾಜೇಗೌಡ, ಕೃಷ್ಣೇಗೌಡ, ಬುವನೇಶ್, ದ್ಯಾವಯ್ಯ, ಗಂಗಾಧರ್, ಲೋಕೇಶ್, ರವಿ, ಕೆಂಪೇಗೌಡ, ದೇವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.