ರಾಷ್ಟ್ರ ನಿರ್ಮಾಣಕ್ಕೆ ಇಂಜಿನಿಯರಿಂಗ್ ಅತ್ಯವಶ್ಯಕ

| Published : Mar 27 2025, 01:04 AM IST

ಸಾರಾಂಶ

ಕೇವಲ ನೌಕರಿ ಅಥವಾ ದೊಡ್ಡ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಯಾರೂ ಇಂಜಿನಿಯರಿಂಗ್ ಕಲಿಯಬಾರದು. ಇಂಜಿನಿಯರಿಂಗ್ ಇದು ಕೇವಲ ಒಂದು ಪದವಿ ಅಲ್ಲ. ಇದು ರಾಷ್ಟ್ರ ನಿರ್ಮಾಣದ ಬುನಾದಿ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಇಂಜಿನಿಯರಿಂಗ್ ಅತಿ ಅವಶ್ಯಕ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇವಲ ನೌಕರಿ ಅಥವಾ ದೊಡ್ಡ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಯಾರೂ ಇಂಜಿನಿಯರಿಂಗ್ ಕಲಿಯಬಾರದು. ಇಂಜಿನಿಯರಿಂಗ್ ಇದು ಕೇವಲ ಒಂದು ಪದವಿ ಅಲ್ಲ. ಇದು ರಾಷ್ಟ್ರ ನಿರ್ಮಾಣದ ಬುನಾದಿ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಇಂಜಿನಿಯರಿಂಗ್ ಅತಿ ಅವಶ್ಯಕ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಭಿಪ್ರಾಯಪಟ್ಟರು. ನಗರದ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಬ್ಲಿಸ್ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಯನ್ನು ಮಾಡಲು ಇಚ್ಚಿಸುವವರು ಹಾಗೂ ಜೀವನಕ್ಕೆ ದಾರಿ ಹುಡುಕುವವರು ದೊಡ್ಡ ಕನಸುಗಳನ್ನೇ ಕಾಣಬೇಕು. ರಾತ್ರಿ ಮಲಗಿದಾಗ ಕಾಣುವುದು ಕನಸಲ್ಲ ನಿದ್ರೆಯೇ ಬರದಂತೆ ದುಡಿಯಲು ಪ್ರೇರೇಪಿಸುವುದೇ ಕನಸು. ಅಂತಹ ಕನಸನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನಿಸಬೇಕು ಎಂದರು.

ಬೆಳಗಾವಿ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಮಾತನಾಡಿ, ತಂತ್ರಜ್ಞಾನವು ದೇಶವನ್ನು ಮುನ್ನಡೆಸುವ ಸಾಧನ. ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಉಚಿತ ಅನ್ನ, ಆಶ್ರಯ, ಅರಿವು ಹಾಗು ಶಿಕ್ಷಣ ನೀಡುವುದರ ಜೊತೆಗೆ ಸಾಂಸ್ಕೃತಿಕ ತಳಹದಿಯ ಮೇಲೆ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯವನ್ನು ವ್ಯರ್ಥಗೊಳಿಸದೆ. ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್‌ ಎಫ್.ವಿ.ಮಾನ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ, ಪ್ರಾಧ್ಯಾಪಕ ಡಾ.ಕೆ.ಬಿ‌.ಪ್ರಕಾಶ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗೌರಿ ಸಾವಳಗಿ, ವರುಣ ಕರೋಶಿ ಕಾರ್ಯಕ್ರಮ ನಿರೂಪಿಸಿದರು.