ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಜ್ಞಾನ ಅಗತ್ಯ

| Published : Jan 31 2025, 12:47 AM IST

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಇಂಗ್ಲಿಷ್ ಜ್ಞಾನ ಮುಖ್ಯವಾಗಿದೆ.

ಹೂವಿನಹಡಗಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಇಂಗ್ಲಿಷ್ ಜ್ಞಾನ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿಗಾಗಿ ಇಂಗ್ಲಿಷ್ ಜ್ಞಾನ ಸಂಪಾದಿಸಿಕೊಳ್ಳಬೇಕೆಂದು ಪ್ರಾಚಾರ್ಯ ಪ್ರಕಾಶ್ ಕಲ್ಲನಗೌಡ್ರ ಹೇಳಿದರು.

ತಾಲೂಕಿನ ಮಾಗಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೊಳಲು, ಮಾಗಳ ಮತ್ತು ಹಿರೇಹಡಗಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಪರೀಕ್ಷಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಗೆ ಒಳಗಾಗದೇ ಉನ್ನತ ಹುದ್ದೆಗೆ ಏರುವ ಛಲ ಹೊಂದಬೇಕು. ಉತ್ತಮ ಫಲಿತಾಂಶ ಪಡೆಯುವ ಮೂಲಕ ಹೆತ್ತವರಿಗೆ, ಕಾಲೇಜಿಗೆ ಕೀರ್ತಿ ತನ್ನಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಗಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಈಶ್ವರಪ್ಪ, ಗ್ರಾಮೀಣ ಕಾಲೇಜುಗಳಲ್ಲಿನ ಫಲಿತಾಂಶ ಸುಧಾರಣೆಯ ಕ್ರಮವಾಗಿ ಈ ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರ ಆಯೋಜಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಮೂರು ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಿದ್ದು, ವಾರ್ಷಿಕ ಪರೀಕ್ಷೆಗೆ ತಯಾರಾಗಲು ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿವೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಕೂಡ್ಲಿಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಚಾಂದಪೀರ್, ಬದಲಾದ ಹೊಸ ಪರೀಕ್ಷಾ ಪದ್ಧತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದಲ್ಲಿ ಉತ್ತಮ ಅಂಕ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡಿದರು.

ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಎಂ.ರೇವಣಸಿದ್ಧಪ್ಪ, ಪರಶುರಾಮ ನಾಗೋಜಿ, ಕೆ.ಶಬೀನ, ಸುಮಾ ಶಾಕಾರದ, ತಾರಾಸಿಂಗ್, ಮೆಹಬೂಬಸಾಬ್, ಪಂಪಣ್ಣ, ರಾಮಣ್ಣ ಮತ್ತು ಹೊಳಲು, ಹಿರೇಹಡಗಲಿ ಹಾಗೂ ಮಾಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಲಿದ್ದ ಹೊಳಲು, ಹಿರೇಹಡಗಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಮಾಗಳಕ್ಕೆ ನೇರ ಬಸ್ ಸೌಲಭ್ಯ ಇರಲಿಲ್ಲ. ಇದನ್ನು ಅರಿತ ಮಾಗಳ ಗ್ರಾಮಸ್ಥರು ಹೂವಿನಹಡಗಲಿ ಘಟಕ ವ್ಯವಸ್ಥಾಪಕರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಹೂವಿನಹಡಗಲಿ ಘಟಕ ವ್ಯವಸ್ಥಾಪಕ ವೆಂಕಟಾಚಲಪತಿ, ಬೆಳಗ್ಗೆ ಹಾಗೂ ಸಂಜೆ ಕಾರ್ಯಾಗಾರದ ಸಮಯಕ್ಕೆ ಬಸ್ ಕಳಿಸಲು ಸೂಚಿಸಿ, ಎರಡೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ನೆರವಾದರು. ಮಾಗಳ ಗ್ರಾಮಸ್ಥರು ಹಾಗೂ ಘಟಕ ವ್ಯವಸ್ಥಾಪಕರ ಈ ಕಾಳಜಿಯನ್ನು ತಾಲೂಕಿನ ಶಿಕ್ಷಣ ಪ್ರೇಮಿಗಳು ಕೊಂಡಾಡಿದ್ದಾರೆ.

ನಮ್ಮೂರಿನ ಕಾಲೇಜಿನಲ್ಲಿ ಜರುಗುವ ಕಾರ್ಯಾಗಾರಕ್ಕೆ ತಲುಪಲು ಬೇರೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು, ಬಸ್ ಸಲುವಾಗಿ ಮನವಿ ಸಲ್ಲಿಸಿದ್ದೆವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ನಮ್ಮ ಶ್ರಮ ಸಾರ್ಥಕ ಎಂದು ಮಾಗಳದ ಶಿಕ್ಷಣಪ್ರೇಮಿ ವಿಶ್ವಪಾಲ್ ಕೆಂಪಕಟ್ಟಿ ತಿಳಿಸಿದರು.