ವಿದ್ಯಾರ್ಥಿ ಜೀವನದ ಪ್ರತಿಕ್ಷಣವನ್ನೂ ಆನಂದಿಸಿ: ಶ್ರೀನಿವಾಸ ಮಾನೆ

| Published : Feb 08 2024, 01:38 AM IST

ವಿದ್ಯಾರ್ಥಿ ಜೀವನದ ಪ್ರತಿಕ್ಷಣವನ್ನೂ ಆನಂದಿಸಿ: ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನದ ಪ್ರತಿಕ್ಷಣವನ್ನೂ ಆನಂದಿಸಬೇಕು. ಸದಾ ಹೊಸತನ ಹುಡುಕಬೇಕು.

ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟನೆ ಮಾಡಿದ ಶಾಸಕ

ಕನ್ನಡಪ್ರಭ ವಾರ್ತೆ ಹಾನಗಲ್ಲ

ವಿದ್ಯಾರ್ಥಿ ಜೀವನದ ಪ್ರತಿಕ್ಷಣವನ್ನೂ ಆನಂದಿಸಬೇಕು. ಸದಾ ಹೊಸತನ ಹುಡುಕಬೇಕು. ಸಮಯ ವ್ಯರ್ಥವಾಗಿ ಕಳೆಯದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಾತೊರೆಯಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಕಿವಿಮಾತು ಹೇಳಿದರು.

ತಾಲೂಕಿನ ಮಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೈ ಬೆರಳಿನಲ್ಲಿ ಇಡೀ ಜಗತ್ತಿನ ಸಂಪೂರ್ಣ ಮಾಹಿತಿ ದೊರೆಯುವ ಕಾಲವಿದು. ಬದಲಾದ ಕಾಲಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಸಾಗಬೇಕಿದೆ. ದೊಡ್ಡ ಗುರಿ ಇಟ್ಟುಕೊಂಡು ಅದರ ಬೆನ್ನು ಹತ್ತಿದರೆ ಅಸಾಧ್ಯವೂ ಸಾಧ್ಯವಾಗಲಿದೆ. ಸಾಧಕರ ಸಾಧನೆಯ ಹಿಂದಿನ ಪರಿಶ್ರಮವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ನಿಮ್ಮ ಸಾಧನೆಯ ಮಾರ್ಗವೂ ಸುಲಭವಾಗಲಿದೆ ಎಂದ ಅವರು, ತಾಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಒತ್ತು ನೀಡಲಾಗಿದೆ. ಶೀಘ್ರ ೬೫ ಸರ್ಕಾರಿ ಶಾಲೆಗಳು ಸ್ಮಾರ್ಟ್ ಶಾಲೆಗಳಾಗಲಿವೆ. ಮಲಗುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಸೌಲಭ್ಯ ಕಲ್ಪಿಸಲು ಸುಮಾರು ₹೨ ಲಕ್ಷ ಸಂಗ್ರಹಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಕಲಿತ ಶಾಲೆಗೆ ಕೈಲಾದ ನೆರವು ನೀಡಲು ಪ್ರತಿಯೊಬ್ಬರೂ ಮುಂದೆ ಬಂದರೆ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲವಾಗಲಿದೆ. ಭಾರತವೂ ಸದೃಢವಾಗಲಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಾಘೂ ಗುಡ್ಡದವರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ತಾಪಂ ಮಾಜಿ ಸದಸ್ಯ ತಿಪ್ಪಣ್ಣ ದೊಡ್ಡಕೋವಿ, ಗ್ರಾಪಂ ಅಧ್ಯಕ್ಷ ಸೋಮನಗೌಡ ಕಬ್ಬೂರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾಂಜಲಿ ತಳವಾರ, ಗ್ರಾಪಂ ಸದಸ್ಯರಾದ ಚಿದಾನಂದಯ್ಯ ಹಿರೇಮಠ, ಸುವರ್ಣಮ್ಮ ಪೂಜಾರ, ರೇಖಾ ಪೂಜಾರ, ನಿವೃತ್ತ ಶಿಕ್ಷಕ ಬಿ.ವಿ.ಬಿರಾದಾರ, ವಿಜಯೇಂದ್ರ ಯತ್ನಳ್ಳಿ, ಮುರುಗೇಶ ಬಾಳೂರ, ವಿ.ಟಿ.ಪಾಟೀಲ, ಗಂಗಮ್ಮ ಬಾರ್ಕಿ, ಪುಷ್ಪಾ ಗಂಟಿ, ಎಂ.ಆರ್.ಬಾರ್ಕಿ, ನಾಗೇಂದ್ರಪ್ಪ ಡಿ., ಮಂಜಪ್ಪ ತಳವಾರ ಸೇರಿದಂತೆ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು ಇದ್ದರು.