ಗದಗ: ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಮುಂದಿನ ಪೀಳಿಗೆಗೆ ಹಸಿರು ಪರಂಪರೆಯನ್ನು ಉಳಿಸಿಕೊಡುವ ಉದ್ದೇಶದಿಂದ ರೋಟರಿ ಜಿಲ್ಲಾ 3170 ವತಿಯಿಂದ ಜಿಲ್ಲಾದ್ಯಂತ ಬೃಹತ್ ವೃಕ್ಷಾರೋಪಣ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ತಿಳಿಸಿದರು.
ರೋಟರಿ ಕ್ಲಬ್‌ನ ಐಕೇರ್ ಸೆಂಟರ್ ಆವರಣದಲ್ಲಿ ಭಾನುವಾರದ ಜು. 12ರಿಂದ 19ರ ವರೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯಲಿರುವ ಬೃಹತ್ ವೃಕ್ಷಾರೋಪಣ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಹವಾಮಾನ ವೈಪರಿತ್ಯ, ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನದ ಸವಾಲುಗಳನ್ನು ಎದುರಿಸಲು ವೃಕ್ಷಾರೋಪಣವೇ ಪರಿಣಾಮಕಾರಿ ಪರಿಹಾರವಾಗಿದೆ. ಗಿಡ ನೆಡುವುದಷ್ಟೇ ಅಲ್ಲದೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ರೋಟರಿ ಹೊತ್ತುಕೊಂಡಿದ್ದು, ನಿಯಮಿತ ನೀರುಣಿಕೆ, ಬೇಲಿ ಅಳವಡಿಕೆ ಮತ್ತು ನಿರಂತರ ಮೇಲ್ವಿಚಾರಣೆಯ ಮೂಲಕ ಗಿಡಗಳ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾದ್ಯಂತ ನಡೆಯಲಿರುವ ಈ ಹಸಿರು ಅಭಿಯಾನದಲ್ಲಿ ರೋಟರಾಕ್ಟ್ ಹಾಗೂ ಇಂಟರಾಕ್ಟ್ ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಪರಿಸರ ಪ್ರೇಮಿಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಪ್ರತಿಯೊಬ್ಬ ನಾಗರಿಕರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಪೋಷಣೆಯ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಈ ಜನಾಂದೋಲನದಲ್ಲಿ ಪಾಲ್ಗೊಳ್ಳಬೇಕು, ಗದಗ ಜಿಲ್ಲಾ ಕ್ರೀಡಾಂಗಣ ಎದುರಿಗೆ ಇರುವ ರೋಟರಿ ಕ್ಲಬ್‌ನಲ್ಲಿ ಒಬ್ಬರಿಗೊಂದು ಸಸಿಯನ್ನು ವಿತರಿಸಲಾಗುತ್ತಿದ್ದು ಆಸಕ್ತರು ಪಡೆಯಬೇಕು ಎಂದರು.
ಡಾ. ಧನೇಶ ದೇಸಾಯಿ, ಡಾ. ರಾಜಶೇಖರ ಬಳ್ಳಾರಿ, ಸುರೇಶ ಕುಂಬಾರ ಹಾಗೂ ಮಂಜುಳಾ ಅಕ್ಕಿ ಮಾತನಾಡಿದರು. ನಿವೃತ್ತ ಅರಣ್ಯಾಧಿಕಾರಿ ಎನ್. ಜಯರಾಮ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕ್ಲಬ್‌ನ ಸದಸ್ಯರು ಇದ್ದರು. ಡಾ. ಪ್ರದೀಪ ಉಗಲಾಟ ಸ್ವಾಗತಿಸಿದರು. ಸಂತೋಷ ಅಕ್ಕಿ ಪರಿಚಯಿಸಿದರು. ಬಾಲಕೃಷ್ಣ ಕಾಮತ್ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ವಂದಿಸಿದರು.