ಕನ್ನಡಪ್ರಭ ವಾರ್ತೆ ಹಾಸನ
ಪರಿಸರ ಸಮತೋಲಿತವಾಗಿದ್ದರೆ ಮಾತ್ರ ನಾವೆಲ್ಲರೂ ಬದುಕಲು ಸಾಧ್ಯ. ಹಾಗಾಗಿ ಅದರ ರಕ್ಷಣೆ ಮಾಡುವುದು ಎಲ್ಲರ ಜವಾವ್ದಾರಿ. ಈ ನಿಟ್ಟಿನಲ್ಲಿ ಸಂರಕ್ಷಣೆ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಜಿಲ್ಲೆಯ ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಹುಣಸಿನಕೆರೆ ಸಮೀಪದ ೮೦ ಅಡಿ ರಸ್ತೆಯ ಮಧ್ಯದ ಡಿವೈಡರ್ ಉದ್ದಲಕ್ಕೂ ಗಿಡ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯು ಮಾನವನಿಗೆ ಯಾವುದೇ ಪ್ರತಿಫಲ ನಿರೀಕ್ಷಿಸದೆ ಅನೇಕ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದೆ. ಶುದ್ಧ ಗಾಳಿ, ನೀರು, ನೆರಳು, ಆಹಾರ ಸೇರಿದಂತೆ ಜೀವ ಉಳಿಸಲು ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಪರಿಸರವೇ ಒದಗಿಸುತ್ತಿದೆ. ಆದರೆ ನಾವು ಪರಿಸರಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ಅರಣ್ಯ ನಾಶ, ಪ್ಲಾಸ್ಟಿಕ್ ಬಳಕೆ ಹಾಗೂ ಪರಿಸರ ಮಾಲಿನ್ಯದಿಂದಾಗಿ ಪ್ರಕೃತಿಯ ಸಮತೋಲನ ಹದಗೆಡುತ್ತಿದೆ. ಇದರ ಪರಿಣಾಮವಾಗಿ ಹವಾಮಾನ ವೈಪರೀತ್ಯ, ನೀರಿನ ಕೊರತೆ, ಉಷ್ಣಾಂಶ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ವಿಶ್ವ ಪರಿಸರ ದಿನವನ್ನು ಕೇವಲ ಒಂದು ದಿನದ ಆಚರಣೆಯಾಗಿ ನೋಡದೆ, ವರ್ಷಪೂರ್ತಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಮನೆ, ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬಹುದು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಮಳೆನೀರು ಸಂಗ್ರಹಣೆ, ಗಿಡ ನೆಡುವುದು ಮತ್ತು ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.ಪೌರಕಾರ್ಮಿಕರ ಸೇವೆ ಶ್ಲಾಘನೀಯ:ಹಾಸನ ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ಬೆಳಗ್ಗೆಯಿಂದಲೇ ಶ್ರಮವಹಿಸಿ ನಗರವನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯವಾಗಿದೆ. ನಾವು ಸ್ವಚ್ಛ ನಗರದಲ್ಲಿ ಬದುಕುತ್ತಿದ್ದರೆ ಅದರ ಹಿಂದೆ ಅವರ ಪರಿಶ್ರಮ ಅಡಗಿದೆ. ಆದ್ದರಿಂದ ಅವರ ಸೇವೆಯನ್ನು ಗೌರವಿಸಿ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸದ ಒತ್ತಡದ ನಡುವೆ ಪರಿಸರಕ್ಕಾಗಿ ಸ್ವಲ್ಪ ಸಮಯ ಮೀಸಲಿಡಬೇಕು. ಒಂದು ಗಿಡ ನೆಡುವುದು, ಅದನ್ನು ಪೋಷಿಸುವುದು, ನೀರನ್ನು ಮಿತವಾಗಿ ಬಳಸುವುದು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ದಾರಿಯಾಗಿದೆ ಎಂದು ತಿಳಿಸಿದರು. ಮುಂದಿನ ತಲೆಮಾರುಗಳಿಗೆ ಶುದ್ಧ ಗಾಳಿ, ಸುರಕ್ಷಿತ ನೀರು ಹಾಗೂ ಆರೋಗ್ಯಕರ ವಾತಾವರಣವನ್ನು ನೀಡುವುದು ನಮ್ಮೆಲ್ಲರ ಹೊಣೆಗಾರಿಕೆ. ಪರಿಸರ ಉಳಿದರೆ ಮಾತ್ರ ಮಾನವ ಬದುಕು ಉಳಿಯುತ್ತದೆ ಎಂಬ ಅರಿವಿನೊಂದಿಗೆ ಎಲ್ಲರೂ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.