ಕನ್ನಡಪ್ರಭ ವಾರ್ತೆ ಶಿಕಾರಿಪುರ
ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಮನುಷ್ಯನ ಸಹಿತ ಭೂಮಿ ಮೇಲಿನ ಪ್ರತಿಯೊಂದು ಜೀವಿ ಬದುಕಲು ಅಗತ್ಯವಾಗಿರುವ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಿವಮೊಗ್ಗದ ಪಿಇಎಸ್ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ವೈ ಉಮಾದೇವಿ ತಿಳಿಸಿದರು.ಶುಕ್ರವಾರ ಪಟ್ಟಣದ ಭವಾನಿ ಕೇರಿಯಲ್ಲಿನ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯ ಮೇಲೆ ಜೀವವಿರುವ ಪ್ರತಿಯೊಂದು ಜೀವ ರಾಶಿಗೆ ಆಹಾರಕ್ಕಿಂತ ಮೊದಲು ಗಾಳಿ ಅತ್ಯಗತ್ಯವಾಗಿದೆ. ಸ್ವಚ್ಛ ಪರಿಸರದಿಂದ ಮಾತ್ರ ಶುದ್ದ ಗಾಳಿ ದೊರೆಯಲು ಸಾದ್ಯ. ಇಂದಿನ ಸ್ಥಿತಿಗತಿಯನ್ನು ನೋಡುತ್ತಿದ್ದರೆ ಮಾನವನಿಗೆ ಗಿಡಗಳ ಮಹತ್ವದ ಅರಿವು ಉಂಟಾಗುತ್ತಿದೆ. ಮಾನವನ ಅತಿಯಾದ ದುರಾಸೆಯ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟುವುದು ಮತ್ತು ಭೂಮಿಯನ್ನು ರಕ್ಷಿಸುವುದು ಪರಿಸರ ದಿನಾಚರಣೆ ಪ್ರಮುಖ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಚಾರ್ಯ ವಿಶ್ವನಾಥ ಪಿ ಮಾತನಾಡಿ, ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಪರಿಸರದ ಮೇಲೆ ಮಾನವ ಚಟುವಟಿಕೆಗಳ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವುದು ಮತ್ತು ಪರಿಸರವನ್ನು ರಕ್ಷಿಸುವುದು ಕರ್ತವ್ಯದ ಜತೆಗೆ ತುರ್ತು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿಜ್ಞಾನ ಶಿಕ್ಷಕಿ ವಿದ್ಯಾ ಕೋರಿಶೆಟ್ಟರ್ ಪರಿಸರ ದಿನಾಚರಣೆಯ ಹಿನ್ನೆಲೆ ಮತ್ತು ಈ ವರ್ಷದ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಪ್ರಶಾಂತ ಕುಬಸದ ಸಹಿತ ಶಾಲೆಯ ಶಿಕ್ಷಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕು.ಮಧುಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿ, ವರ್ಷಿಣಿ ಸ್ವಾಗತಿಸಿ, ಕು ಅಭಿಜ್ಞಾ ನಿರೂಪಿಸಿ, ಆರಾಧ್ಯ ವಂದಿಸಿದರು.